ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶ್ರೀರಾಮುಲು ನಂತರ ಇದೀಗ ವಿಜಯೇಂದ್ರ ವಿರುದ್ಧ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಬಹಿರಂಗವಾಗಿಯೇ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಅವರನ್ನು ಬದಲಿಸಲು ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೆ ನಾನು 2019 ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದೆ. ಎಷ್ಟೇ ಅಪಮಾನವಾದರೂ, ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಪಕ್ಷವನ್ನು ಬಿಡಲಿಲ್ಲ. ನಂತರ ನಾನು ಸೋತರೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿ ಪಾಲಿಗೆ ಮರುಭೂಮಿಯಾಗಿರುವ ಈ ಪ್ರದೇಶದಲ್ಲಿ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ ಎಂದರು.
ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ್ರಾಯ ಕೇಳಬೇಕು. ಆದರೆ ಏಕಚಕ್ರಾಧಿಪತ್ಯ ಎನ್ನುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನ ಮಾತೇ ನಡೆಯಬೇಕೆಂಬಂತೆ ವರ್ತಿಸಿದ್ದಾರೆ. ಜೀ ಹುಜೂರ್, ಯೆಸ್ ಬಾಸ್ ಎನ್ನುವವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಿಗೆ ತಿಳಿಸಿದ್ದೇನೆ. ಎಷ್ಟೇ ನೋವಾದರೂ ನಾನು ಪಕ್ಷದ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಂದು ಮಾತನಾಡಿಲ್ಲ ಎಂದು ಹೇಳಿದರು.
ಈಗಿನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಧೋರಣೆ ಅನೇಕ ಮುಖಂಡರಿಗೆ ನೋವು ತಂದಿದೆ. ಕೇಂದ್ರದ ನಾಯಕರು ಅವರಿಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರಲ್ಲಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾರೆಯೇ ಅಥವಾ ಅದಕ್ಕೂ ಮೇಲಿನ ಹುದ್ದೆಯಲ್ಲಿದ್ದಾರೆಯೇ ಎಂದು ಗೊತ್ತಿಲ್ಲ. ನಾನು ಎಂಟು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯನಾಗಿದ್ದೇನೆ. ಕಾಂಗ್ರೆಸ್ ಆಡಳಿತ ಇದ್ದಾಗಲೂ ನಾನು ಇಲ್ಲಿ ಗೆದ್ದಿದ್ದೇನೆ. ಇವರ ಹಿಂಬಾಲಕರು ನನ್ನನ್ನು ಸೋಲಿಸಲು ಯತ್ನಿಸಿದ್ದರು. ಆದರೆ,ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಇನ್ನು ಸಮಾಧಾನ ಇಲ್ಲ, ಇನ್ನೇನಿದ್ದರೂ ಯುದ್ಧ ಎಂದರು.
ಭೇಟಿಗೆ ಸಮಯ ನೀಡಿಲ್ಲ:ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾತನಾಡಲು ಬಿ.ವೈ.ವಿಜಯೇಂದ್ರ ಅವರಿಗೆ ಫೋನ್ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಭೇಟಿ ಮಾಡಲು ಸಮಯ ಕೂಡ ನಿಗದಿ ಮಾಡಲಿಲ್ಲ. ಹಿರಿಯ ಮುಖಂಡರು ಕೂಡ ಮಾತನಾಡಲು ಭೇಟಿಗೆ ಅವಕಾಶ ನೀಡುತ್ತಾರೆ. ಆದರೆ, ಇಲ್ಲಿ ಸಮಾಲೋಚನೆಯೇ ಇಲ್ಲ. ಇದೇನು ವಿಜಯೇಂದ್ರ ಅವರ ಸ್ವಂತ ಆಸ್ತಿಯೇ? ಬಯಲುಸೀಮೆಯ ಭಾಗಕ್ಕೆ ಬಂದು ಒಂದು ಸೀಟು ಗೆಲ್ಲಲಿ ಎಂದು ಸವಾಲು ಹಾಕಿದರು.