ಹಾವೇರಿ/ದಾವಣಗೆರೆ:"ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿಯಾಗಬಾರದಾ? ಈ ರೀತಿ ಭೇಟಿಗೆ ಭಿನ್ನಮತ ಲೇಪನ ಬೇಡ. ರಾಜ್ಯದ ಹಿತದೃಷ್ಟಿಯ ಹಲವು ಕಾರಣಗಳಿಗೆ ಈ ರೀತಿ ಭೇಟಿಯಾಗುತ್ತಾರೆ. ನಾನೂ ಕೂಡ ಕಳೆದ ಶುಕ್ರವಾರ ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾಗಿದ್ದೆ" ಎಂದು ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಭೆ ಮಾಡಿರುವ ಬಗ್ಗೆ ಹೈಕಮಾಂಡ್ ಗಮನದಲ್ಲಿದೆ, ಅವರು ಸಂಪರ್ಕದಲ್ಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ಬಲವರ್ಧನೆಗಾಗಿ ಸಭೆ ಮಾಡಿರುವುದಾಗಿ ಸ್ವಂತವಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಎಲ್ಲರೂ ಪಕ್ಷದ ಬಲವರ್ಧನೆ ಕೆಲಸದಲ್ಲಿದ್ದಾರೆ. ಪಾದಯಾತ್ರೆ ವಿಚಾರವೇ ಬೇರೆ ಭಿನ್ನಮತವೇ ಬೇರೆ. ಕಾಂಗ್ರೆಸ್‌ನವರು ಐದೈದು ಕಡೆ ಪಾದಯಾತ್ರೆ ಮಾಡಿದ್ದರು. ಈಗ ಒಂದು ಕಡೆ ಮುಡಾ ಇದೆ ಮತ್ತೊಂದು ಕಡೆ ವಾಲ್ಮೀಕಿ ನಿಗಮದ ಪ್ರಕರಣವಿದೆ. ಪಾದಯಾತ್ರೆ ಮಾಡುತ್ತಾರೆ, ಅದರಲ್ಲಿ ತಪ್ಪೇನಿದೆ? ಹೈಕಮಾಂಡ್ ಒಪ್ಪಿದರೆ ಅನುಮತಿ ತೆಗೆದುಕೊಂಡು ಮಾಡುತ್ತಾರೆ" ಎಂದು ತಿಳಿಸಿದರು.
"ಯತ್ನಾಳ್ ಬಗ್ಗೆ ಹೈಕಮಾಂಡ್ ಮೃದುಧೋರಣೆ ಇದೆ ಎನ್ನುವ ಮಾಧ್ಯಮಗಳ ಊಹಾತ್ಮಕ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ರಾಜ್ಯಪಾಲರು ರಾಜ್ಯ ಸರ್ಕಾರದ ಮಸೂದೆಗಳನ್ನು ವಾಪಸ್ ಕಳಿಸಿರುವುದು ಕಾನೂನಿನ ಪ್ರಕ್ರಿಯೆಯಲ್ಲಿ ಅವರಿಗೆ ಇರುವ ಅಧಿಕಾರವನ್ನು ಬಳಕೆ ಮಾಡಿದ್ದಾರೆ. ಆದರೆ ಪ್ರಾಸಿಕ್ಯೂಷನ್ ನೀಡಿದ್ದಕ್ಕೆ ರಾಜ್ಯಪಾಲರು ಬಿಜೆಪಿಯವರ ಮಾತು ಕೇಳಿ ಬಿಲ್ ವಾಪಸ್ ಮಾಡಿದ್ದಾರೆ ಎಂದು ಡಿಕೆಶಿ ಆರೋಪಿಸುತ್ತಿದ್ದಾರೆ. ಈ ಹಿಂದೆ ರಾಜ್ಯಪಾಲರು ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಾಗ ಕಾಂಗ್ರೆಸ್‌ನವರು ಏನು ಹೇಳಿಕೆ ಕೊಟ್ಟಿದ್ದರು?" ಎಂದು ಪ್ರಶ್ನಿಸಿದರು.
"ಜಿಂದಾಲ್‌ಗೆ ಭೂಮಿ ನೀಡುತ್ತಿರುವುದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗುತ್ತದೆ. ನಮ್ಮ ಆಡಳಿತದ ಸಮಯದಲ್ಲಿ ಪ್ರಸ್ತಾವನೆ ಬಂದಾಗ ಕ್ಯಾಬಿನೆಟ್‌ನಲ್ಲಿ ವಾಪಸ್ ತೆಗೆದುಕೊಂಡಿದ್ದೆವು. ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಮಾರುಕಟ್ಟೆಯ ದರದಂತೆ ಕೊಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ಹಿಂದಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಜಿಂದಾಲ್‌ಗೆ ನೀಡಿದ್ದಾರೆ. ಅಂದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗುತ್ತಿದೆ ಎಂದವರು ಇಂದು ಅದಕ್ಕಿಂತ ದೊಡ್ಡ ನಷ್ಟಕ್ಕೆ ಭೂಮಿಯನ್ನು ನೀಡುತ್ತಿದ್ದಾರೆ. ಇದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದದ್ದು. ಈ ಕೂಡಲೇ ಅದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದರಲ್ಲಿ ಏನೋ ವ್ಯವಹಾರ ಕುದುರಿದೆ ಎಂಬುದಕ್ಕೆ ಪುಷ್ಠಿ ಸಿಗುತ್ತದೆ" ಎಂದು ಆರೋಪಿಸಿದರು.
"ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡವಾಗುತ್ತಾ? ಏನಾಗುತ್ತೆ ಎಂಬುವುದಕ್ಕೆ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಏನಾಗುತ್ತೆ ಕಾದು ನೋಡಬೇಕು. ಗೃಹ ಸಚಿವ ಪರಮೇಶ್ವರ್ ಬಿಜೆಪಿಯವರ ಹಿಂದಿನ ಹಗರಣ ಬಯಲಿಗೆ ಎಳೆಯುತ್ತೇವೆ ಎನ್ನುತ್ತಾರೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಹೇಳುತ್ತಿದ್ದಾರೆ. ಅವಶ್ಯವಾಗಿ ಮಾಡಲಿ" ಎಂದರು.