ಶಿರಸಿ:ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನದ ಕುರಿತಾದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, 'ಅದು ಅವರ ವೈಯಕ್ತಿಕ ಅಭಿಪ್ರಾಯ' ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಕಳೆದ ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸಂವಿಧಾನ ತಿದ್ದುಪಡಿ ಕುರಿತು ಸಂಸದ ಹೆಗಡೆ ಹೇಳಿಕೆ ನೀಡಿದ್ದರು. ಸಂವಿಧಾನ ತಿದ್ದುಪಡಿ ಆಗಬೇಕು ಎಂದರೆ ರಾಜ್ಯಸಭೆ, ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರಬೇಕು ಎಂದಿದ್ದರು. ಅಲ್ಲದೇ, ಕಾಂಗ್ರೆಸ್ನವರು ಸಂವಿಧಾನ ಮೂಲರೂಪವನ್ನು ತಿರುಚಿದ್ರು, ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ದಾರೆ ಎಂದು ಆರೋಪಿಸಿದ್ದರು.
ಇಡೀ ಹಿಂದೂ ಸಮಾಜವನ್ನು ಧಮನಿಸೋ ರೀತಿ ಕಾನೂನು ತಂದಿಟ್ಟಿದ್ದರು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು. ಈ ಕುರಿತಂತೆ ಪೋಸ್ಟ್ ಮಾಡಿರುವ ಬಿಜೆಪಿ, ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ, ಅದು ಪಕ್ಷದ ನಿಲುವಲ್ಲ ಎಂದು ಸ್ಪಷ್ಟಪಡಿಸಿದೆ. ''ಸಂಸದ ಅನಂತಕುಮಾರ್ ಹೆಗಡೆಯವರ ಸಂವಿಧಾನದ ಕುರಿತಾದ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅದು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಬಿಜೆಪಿಯು ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ಅಚಲ ಬದ್ಧತೆ ಹೊಂದಿದೆ ಎಂಬುದನ್ನು ಪುನರುಚ್ಚರಿಸುತ್ತೇವೆ. ಹೆಗ್ಗಡೆಯವರ ಅಭಿಪ್ರಾಯಗಳ ಸಂಬಂಧ ಅವರ ಕಡೆಯಿಂದ ವಿವರಣೆ ಕೇಳುತ್ತೇವೆ'' ಎಂದು ಭಾನುವಾರ ಪೋಸ್ಟ್ ಮಾಡಲಾಗಿದೆ.
ಈ ಹಿಂದೆಯೂ ಸಂವಿಧಾನ ತಿದ್ದುಪಡಿ ಕುರಿತು ಸಂಸದ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ವಿವಿಧ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದರಿಂದ ಲೋಕಸಭಾ ಚುನಾವಣೆಯ ಸಮೀಪದಲ್ಲೇ ಈ ಹೇಳಿಕೆ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದು, ರಾಜ್ಯ ಬಿಜೆಪಿ ಘಟಕ ಸ್ಪಷ್ಟನೆ ನೀಡಿದೆದೆ.
ಇದನ್ನೂ ಓದಿ:ಕಾಂಗ್ರೆಸ್ನವರು ಮೂಲಭೂತವಾಗಿ ಸಂವಿಧಾನ ತಿರುಚಿದ್ದಾರೆ: ಅನಂತ್ಕುಮಾರ್ ಹೆಗಡೆ