ಮೈಸೂರು: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ ಸಾವನ್ನಪ್ಪಿದ್ದು, ಎರಡು ವರ್ಷದ ಮಗು ಅದೃಷ್ಟ ರೀತಿಯಲ್ಲಿ ಪಾರಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಮೈಸೂರು - ಕೊಡಗು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ, ಪರಿಶೀಲಿಸಿದರು.
ಕೊಡಗು - ಮೈಸೂರು ಜಿಲ್ಲೆಯಲ್ಲಿ ಒಂದು ವಾರದಿಂದ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಹಳ್ಳ - ಕೊಳ್ಳಗಳು, ಜಲಾಶಯಗಳು, ನದಿಗಳು ತುಂಬಿ ಹರಿಯುತ್ತಿವೆ. ಶುಕ್ರವಾರ ಬೆಳಗ್ಗೆ ಕಗ್ಗಂಡಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು, ಸ್ಥಳದಲ್ಲೇ ಹೇಮಾವತಿ ಎಂಬ (22) ವರ್ಷದ ಮಹಿಳೆ ಸಾವನ್ನಪಿದ್ದಾರೆ. ಗೋಡೆ ಬೀಳುವಾಗ ತನ್ನ ಕೈಯ್ಯಲ್ಲಿದ್ದ ಎರಡು ವರ್ಷದ ಮಗುವನ್ನು ಮಹಿಳೆ ಹೊರಕ್ಕೆ ಎಸೆದಿದ್ದು, ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದೆ.
ಮಳೆ ಹಾನಿ ಪ್ರದೇಶಗಳಿಗೆ ಸಂಸದ ಭೇಟಿ:ಮೈಸೂರು - ಕೊಡಗು ಜಿಲ್ಲೆಯ ಸಂಸದ ಯದುವೀರ್ ಒಡೆಯರ್ ಇಂದು ಕೊಡಗು ಜಿಲ್ಲೆಯ ಮಡಿಕೇರಿ ಪಟ್ಟಣ, ಕುಶಾಲನಗರ, ಮತ್ತು ಹತ್ತೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿದರು. ಮಳೆಯಿಂದ ಮನೆ ಕಳೆದುಕೊಂಡ ಜನರಿಗೆ ಪರಿಹಾರ ಒದಗಿಸಿ ಅವರಿಗೆ ತಕ್ಷಣ ತಾತ್ಕಾಲಿಕ ಆಶ್ರಯಗಳನ್ನು ಕಲ್ಪಿಸುವಂತೆ ಸಂಸದರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಮಳೆಯಿಂದ ಹಾನಿಗೊಳಗಾದ ವ್ಯಕ್ತಿಗಳಿಗೆ ಎನ್.ಡಿ.ಎಂ.ಎಫ್. ಮೂಲಕ ಪರಿಹಾರ ನೀಡುವಂತೆ ಸೂಚಿಸಿದರು.