ಬೆಂಗಳೂರು:ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರದ ಅಬ್ಬರ ಜೋರಾಗಿದ್ದು, ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಅಂದರೆ 29 ಅಭ್ಯರ್ಥಿಗಳಿದ್ದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತಿ ಕಡಿಮೆ 9 ಉಮೇದುವಾರರಿದ್ದಾರೆ.
ಮೊದಲ ಹಂತದ ಚುನಾವಣೆಗೆ ಒಟ್ಟು 226 ಪುರುಷರು ಹಾಗೂ 21 ಮಂದಿ ಮಹಿಳಾ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 14 ಕ್ಷೇತ್ರಗಳಲ್ಲಿ ಕಾಂಗ್ರೆಸ್, 11 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 3 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿತ್ರದುರ್ಗ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಂಡಾಯದ ಗಾಳಿ ಬೀಸಿದ್ದರೂ, ಬಳಿಕ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಸಂಧಾನದಿಂದಾಗಿ ಶಮನವಾಗಿದೆ. ಹೀಗಾಗಿ, ಕಾಂಗ್ರೆಸ್, ಬಿಜೆಪಿ-ಜೆಡಿಎಸ್ಗೆ ಪ್ರಬಲ ಬಂಡಾಯ ಅಭ್ಯರ್ಥಿಗಳು ಎದುರಾಗಿಲ್ಲ. ಈ ಬಾರಿಯೂ ಎಲ್ಲ ಕ್ಷೇತ್ರಗಳಲ್ಲಿ ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಹೀಗಿದೆ:
ಚಿಕ್ಕಬಳ್ಳಾಪುರ:29 ಅಭ್ಯರ್ಥಿಗಳ ಪೈಕಿ 28 ಪುರುಷರು ಮತ್ತು ಓರ್ವ ಮಹಿಳೆ ಕಣದಲ್ಲಿದ್ದಾರೆ.
ದಕ್ಷಿಣ ಕನ್ನಡ:9 ಅಭ್ಯರ್ಥಿಗಳಲ್ಲಿ 8 ಜನ ಪುರುಷರು ಮತ್ತು ಓರ್ವ ಮಹಿಳೆ ಇದ್ದಾರೆ.
ಉಡುಪಿ-ಚಿಕ್ಕಮಗಳೂರು:ಕ್ಷೇತ್ರದಲ್ಲಿ ಒಟ್ಟು 10 ಮಂದಿ ಕಣದಲ್ಲಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.
ಚಿತ್ರದುರ್ಗ:20 ಅಭ್ಯರ್ಥಿಗಳಿದ್ದು, 18 ಪುರುಷರು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳಿದ್ದಾರೆ.
ತುಮಕೂರು:18 ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದ್ದು, 17 ಜನ ಪುರುಷರು ಮತ್ತು ಓರ್ವ ಮಹಿಳೆ ಸ್ಪರ್ಧೆಯಲ್ಲಿದ್ದಾರೆ.
ಮಂಡ್ಯ:14 ಅಭ್ಯರ್ಥಿಗಳ ನಡುವೆ ಪೈಪೋಟಿ ಇದ್ದು, 13 ಪುರುಷರು ಮತ್ತು ಓರ್ವ ಮಹಿಳೆ ಅಖಾಡಕ್ಕಿಳಿದಿದ್ದಾರೆ.
ಹಾಸನ:ಕಣದಲ್ಲಿರುವ ಎಲ್ಲ 15 ಅಭ್ಯರ್ಥಿಗಳೂ ಪುರುಷರೇ ಆಗಿದ್ದಾರೆ.
ಮೈಸೂರು-ಕೊಡಗು:18 ಮಂದಿ ಕಣದಲ್ಲಿದ್ದು, 17 ಪುರುಷರು ಮತ್ತು ಓರ್ವ ಮಹಿಳೆ ಸ್ಪರ್ಧೆಗಿಳಿದಿದ್ದಾರೆ.
ಚಾಮರಾಜನಗರ:14 ಅಭ್ಯರ್ಥಿಗಳು ಅಖಾಡದಲ್ಲಿದ್ದು, 13 ಪುರುಷರು ಮತ್ತು ಒಬ್ಬರು ಮಹಿಳೆಯರಿದ್ದಾರೆ.
ಬೆಂಗಳೂರು ಗ್ರಾಮಾಂತರ: 15 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, 14 ಪುರುಷರು ಮತ್ತು ಒಬ್ಬ ಮಹಿಳೆಯರಿದ್ದಾರೆ.
ಬೆಂಗಳೂರು ಉತ್ತರ:21 ಅಭ್ಯರ್ಥಿಗಳಿದ್ದು, 15 ಪುರುಷರು ಮತ್ತು 6 ಜನ ಮಹಿಳೆಯರು ಸ್ಪರ್ಧಿಸಿದ್ದಾರೆ.
ಬೆಂಗಳೂರು ಕೇಂದ್ರ:24 ಅಭ್ಯರ್ಥಿಗಳು ಇದ್ದು, 21 ಜನ ಪುರುಷರು, ಮೂವರು ಮಹಿಳೆಯರ ಚುನಾವಣಾ ಕಣದಲ್ಲಿದ್ದಾರೆ.
ಬೆಂಗಳೂರು ದಕ್ಷಿಣ:22 ಮಂದಿ ಸ್ಪರ್ಧಿಸಿದ್ದು, 19 ಪುರುಷರು, ಮೂವರು ಮಹಿಳೆಯರು ಅಖಾಡದಲ್ಲಿದ್ದಾರೆ.
ಕೋಲಾರ:ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.
ಲೋಕ ಅಖಾಡಕ್ಕಿಳಿದಿರುವ ಪ್ರಮುಖರು: ಮಂಡ್ಯದಲ್ಲಿ ಮಾಜಿ ಮೂಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ.ಎನ್. ಮಂಜುನಾಥ್, ಹಾಲಿ ಸಂಸದ ಡಿ.ಕೆ. ಸುರೇಶ್, ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರದಲ್ಲಿ ಸುನೀಲ್ ಬೋಸ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ತುಮಕೂರಿನಲ್ಲಿ ವಿ. ಸೋಮಣ್ಣ, ಚಿಕ್ಕಬಳ್ಳಾಪುರದಲ್ಲಿ ಡಾ. ಕೆ.ಸುಧಾಕರ್ ಸೇರಿ ಹಲವು ಪ್ರಮುಖರು ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳಾಗಿದ್ದಾರೆ.
ಜಿದ್ದಾಜಿದ್ದಿನ ಕ್ಷೇತ್ರಗಳು:ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿದ್ದಾಜಿದ್ದಿನ ಕ್ಷೇತ್ರಗಳಾಗಿದ್ದರೆ, ಮೈಸೂರು, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿವೆ. ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಟ್ಟಿರುವ ಸಿಎಂ ಸಿದ್ದರಾಮಯ್ಯ, ಹಲವು ರೀತಿಯ ತಂತ್ರಗಾರಿಕೆ ಮೂಲಕ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸಡ್ಡು ಹೊಡೆಯಲು ಬಿಜೆಪಿಯೂ ಕೂಡ ಹಿಂದೆ ಬಿದ್ದಿಲ್ಲ. ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ನಾಯಕರು ನಾನಾ ಕಸರತ್ತು ಮಾಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಷ್ಟ್ರವೇ ತಿರುಗಿ ನೋಡುವಂತೆ ಮಾಡಿದೆ. ಇಲ್ಲಿ ಕಾಂಗ್ರೆಸ್ನಿಂದ ಡಿ.ಕೆ. ಸುರೇಶ್ ಹಾಗೂ ಬಿಜೆಪಿಯಿಂದ ಡಾ. ಸಿ.ಎನ್. ಮಂಜುನಾಥ್ ಅವರು ಕಣಕ್ಕಿಳಿದಿದ್ದು, ಜಿದ್ದಾಜಿದ್ದಿನ ಜೊತೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನತ್ತ ತೆಗೆದುಕೊಳ್ಳಲು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಹಾಗಾಗಿ, ಡಿಸಿಎಂ ಡಿ.ಕೆ. ಶಿವಕುಮಾರ್, ಹಾಲಿ ಸಂಸದ ಡಿ.ಕೆ. ಸುರೇಶ್ ಅವರು ಚುನಾವಣಾ ತಂತ್ರ ನಡೆಸುತ್ತಿದ್ದಾರೆ. ಅದೇ ರೀತಿ ಬಿಜೆಪಿ ನಾಯಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಸಹ ಸಿ.ಎನ್. ಮಂಜುನಾಥ್ ಅವರ ಗೆಲುವಿಗೆ ಪ್ರತಿತಂತ್ರ ರೂಪಿಸಿದ್ದಾರೆ. ಮತದಾನಕ್ಕೆ ಕೇವಲ 12 ದಿನಗಳು ಮಾತ್ರ ಬಾಕಿ ಇದ್ದು, ಎಲ್ಲಾ ಪಕ್ಷದವರು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಳೆದ ಬಾರಿಗಿಂತ ಈ ಬಾರಿ ಗೆಲುವಿನ ವಿಶ್ವಾಸ ಹೆಚ್ಚಿದೆ : ಈಟಿವಿ ಭಾರತದೊಂದಿಗೆ ಗೀತಾ ಶಿವರಾಜಕುಮಾರ್ ಮಾತು