ದಾವಣಗೆರೆ:ವ್ಯಾಪಾರಿಯೊಬ್ಬರ ಬಳಿ ಅಡಿಕೆ ಖರೀದಿಸಿ, ಬಳಿಕ ಬರೋಬ್ಬರಿ 86.86 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹೊನ್ನಾಳಿ ತಾಲೂಕಿನ ಎಂಆರ್ಕೆ ಟ್ರೇಡರ್ಸ್ನ ಝಾಕೀರ್ ಎಂಬುವರು ವಂಚನೆಗೆ ಒಳಗಾದ ಬಗ್ಗೆ ದೂರು ದಾಖಲಿಸಿದ್ದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿಯ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿ ಮಾಲೀಕ ಮಯಾಂಕ್ ಶೇಖರ್ ಗುಪ್ತಾ ವಂಚನೆ ಮಾಡಿದವರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಝಾಕೀರ್ ಹಲವು ದಿನಗಳಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದರು. ಮೊದಲು ಸಣ್ಣ ಪ್ರಮಾಣದಲ್ಲಿ ಶಿವಮೊಗ್ಗ ಮೂಲದ ಪ್ರಶಾಂತ್ ಎಂಬಾತನಿಗೆ ಅಡಿಕೆ ಮಾರಾಟ ಮಾಡುತ್ತಿದ್ದರು. ಪ್ರಶಾಂತ್ ಝಾಕೀರ್ ಬಳಿ ಅಡಿಕೆ ಖರೀದಿಸಿ, ದೆಹಲಿ ಮೂಲದ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿಗೆ ಮಾರುತ್ತಿದ್ದರು.
ಈ ನಡುವೆ ಝಾಕೀರ್ ರೈತರಿಂದ ಖರೀದಿಸಿದ ಅಡಿಕೆಯನ್ನು ಪ್ರಶಾಂತ್ ಬದಲು ನೇರವಾಗಿ ದೆಹಲಿ ಮೂಲದ ವಿವೇಕ್ ಬ್ರದರ್ಸ್‌ಗೆ ಟ್ರೇಡಿಂಗ್ಗೆ ಮಾರಾಟ ಮಾಡಬೇಕೆಂದು ಇಚ್ಛಿಸಿ ಪ್ರಶಾಂತ್ ಬಳಿಯೇ ಸಹಾಯ ಕೇಳಿದ್ದರು. ಆದರೆ, ಪ್ರಶಾಂತ್ ವಿವೇಕ್ ಬ್ರದರ್ಸ್ ಜೊತೆ ನೇರವಾಗಿ ವ್ಯವಹಾರ ನಡೆಸುವಂತೆ ಸೂಚಿಸಿದ್ದರಂತೆ.
ಝಾಕೀರ್ ಒಂದು ಕೆ.ಜಿ ಅಡಿಕೆಗೆ 272 ರೂ.ಯಂತೆ 70 ಕೆ.ಜಿಯ 350 ಚೀಲಗಳಲ್ಲಿ ಅಡಿಕೆಯನ್ನು ವಿವೇಕ್ ಬ್ರದರ್ಸ್ನ ಮಯಾಂಕ್ ಗುಪ್ತಾಗೆ ಕಳುಹಿಸಿದ್ದರು. ಮತ್ತೊಂದು ಲೋಡ್ ಬೇಕು ಎಂದು ಗುಪ್ತಾ ತಿಳಿಸಿದಾಗ ಅದನ್ನೂ ಕಳುಹಿಸಿದ್ದರಂತೆ. ಒಟ್ಟು ಅಡಿಕೆ ಲೋಡ್ನ ಮೌಲ್ಯ 1.41 ಕೋಟಿ ರೂ. ಆಗಿತ್ತು. ಅದರಲ್ಲಿ ವಿವೇಕ್ ಬ್ರದರ್ಸ್ ಎರಡು ಹಂತಗಳಲ್ಲಿ ಒಟ್ಟು 55 ಲಕ್ಷ ರೂ. ಪಾವತಿಸಿದ್ದು, ಉಳಿದ ಹಣ ನೀಡಿಲ್ಲ. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ಝಾಕೀರ್ ದೂರಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಇಎನ್ ಪಿಐ ಪ್ರತಿಕ್ರಿಯೆ:ಈ ಬಗ್ಗೆ ಸಿಇಎನ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಸಾದ್ ಅವರು ಪ್ರತಿಕ್ರಿಯಿಸಿ "ಅಡಿಕೆ ವ್ಯಾಪಾರದಲ್ಲಿ ಮೋಸ ಆಗಿರುವ ಬಗ್ಗೆ ಝಾಕೀರ್ ಎಂಬುವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಝಾಕೀರ್ ದೆಹಲಿ ಮೂಲದ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿಗೆ ಮಾರಾಟ ಮಾಡಲು ಇಚ್ಛಿಸಿ ಎರಡು ಲೋಡ್ ಅಡಿಕೆ ಕಳಿಸಿದ್ದಾರೆ. ಅಡಿಕೆ ಪಡೆದ ವಿವೇಕ್ ಬ್ರದರ್ಸ್ ಎರಡು ಹಂತಗಳಲ್ಲಿ 55 ಲಕ್ಷ ರೂ. ಪಾವತಿಸಿ, ಉಳಿದ 86.86 ಲಕ್ಷ ಹಣವ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಈಗಾಗಲೇ ವಿವೇಕ್ ಬ್ರದರ್ಸ್ ಮಾಲೀಕ ಮಯಾಂಕ್ ಶೇಖರ್ ಗುಪ್ತಾರನ್ನು ಸಂಪರ್ಕಿಸಿ ಮಾತನಾಡಿದ್ದು, ಅವರು ವಿಚಾರಣೆಗೆ ಬರಲು ಒಪ್ಪಿದ್ದಾರೆ'' ಎಂದು ಮಾಹಿತಿ ನೀಡಿದರು.
ಕಳಪೆ ಅಡಿಕೆ ಆರೋಪ:''ಪೊಲೀಸರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವಿವೇಕ್ ಬ್ರದರ್ಸ್ ಮಾಲೀಕ ಮಯಾಂಕ್ ಶೇಖರ್ ಗುಪ್ತಾ, ದೂರುದಾರ ಅಡಿಕೆ ವ್ಯಾಪಾರಿ ಝಾಕೀರ್ ನನಗೆ ಕಳಪೆ ಮಟ್ಟದ ಅಡಿಕೆ ಕಳುಹಿಸಿದ್ದಾರೆ. ಅದಕ್ಕೆ ತಕ್ಕಂತೆ ನಾವು ಅವರಿಗೆ ಬೆಲೆ ನಿಗದಿ ಮಾಡಿ ಕೊಡಬೇಕಾದ ಹಣವನ್ನು ತಲುಪಿಸಿದ್ದೇವೆ. ಅದರ ದಾಖಲೆ ನಮ್ಮ ಬಳಿ ಇದೆ, ನಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸುವ ಝಾಕೀರ್ ಬಳಿ ದಾಖಲೆ ಇದ್ದರೆ ನೀಡಲಿ, ಠಾಣೆಗೆ ಬರುವೆ ಎಂದು ಹೇಳಿದ್ದಾರೆ'' ಎಂದು ಪಿಐ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಸರ್ಜರಿಗೆ ಬಂದ ಮಹಿಳೆಯಿಂದ ವೈದ್ಯನಿಗೆ ₹ 6 ಕೋಟಿ ವಂಚನೆ ಆರೋಪ, ಎಫ್ಐಆರ್ ದಾಖಲು