ತುಮಕೂರು:ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿದ್ದು ಅಂತಿಮ ಇತ್ಯರ್ಥಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದೆ. ನ್ಯಾಯಾಧೀಶರು ಇದನ್ನು ಇತ್ಯರ್ಥಪಡಿಸುವಲ್ಲಿ ಹೆಚ್ಚು ಗಮನಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ನ್ಯಾಯಾಧೀಶರುಗಳು ಹೆಚ್ಚು ಮುತುವರ್ಜಿ ವಹಿಸಿ ಪ್ರತಿ ಲೋಕ ಅದಾಲತ್ನಲ್ಲಿ ಪ್ರಮುಖ ಅಂಶವಾಗಿ ಇದನ್ನು ಪರಿಗಣಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.
ಈ ವರ್ಷ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾಗಿದ್ದ ಲೋಕ್ ಅದಾಲತ್ನಲ್ಲಿ ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರು, ಇದುವರೆಗೆ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಲೋಕ ಅದಾಲತ್ಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದವರನ್ನು ಮಾತುಕತೆ ಮೂಲಕ ಒಂದಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈ ತಿಂಗಳಲ್ಲಿ ನಡೆಯಲಿರುವ ಲೋಕ ಅದಾಲತ್ನಲ್ಲಿಯೂ ಕೂಡ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜಿಲ್ಲಾ ನ್ಯಾಯಾಧೀಶರು ಎಲ್ಲ ರೀತಿಯ ತಯಾರಿಯನ್ನು ನಡೆಸಿದ್ದಾರೆ.
ಕೌಟುಂಬಿಕ ಕಲಹಗಳಲ್ಲಿ ಮೊದಲಿಗೆ ಕುಳಿತು ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿ ಇರುತ್ತಾರೆ. ಆದರೂ ಕೂಡ ಅಲ್ಲಿ ಸಮಸ್ಯೆ ಬಗೆಹರಿಯದೆ ನ್ಯಾಯಾಲಯಕ್ಕೆ ಬಂದಿರುತ್ತದೆ. ಆ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಇಬ್ಬರನ್ನು ಕೂರಿಸಿ ಅವರ ಮಕ್ಕಳ ಭವಿಷ್ಯದ ಕುರಿತು ಅವರಿಗೆ ತಿಳುವಳಿಕೆ ನೀಡಲಾಗುವುದು. ಈ ಮೂಲಕ ಅವರಿಗೆ ಮನ ಪರಿವರ್ತನೆಯನ್ನು ಮಾಡಲಾಗುತ್ತಿದೆ.