ಕರ್ನಾಟಕ

karnataka

ETV Bharat / state

ಬಡ್ತಿ ನಿರಾಕರಿಸಿದ 250ಕ್ಕೂ ಹೆಚ್ಚು ಪೊಲೀಸ್‌ ಕಾನ್​ಸ್ಟೇಬಲ್​ಗಳು: ಕಾರಣ ಇದು! - Police Constables Promotion - POLICE CONSTABLES PROMOTION

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 250ಕ್ಕಿಂತ ಹೆಚ್ಚು ಮಂದಿ ಕಾನ್ಸ್​ಸ್ಟೇಬಲ್ ಹಾಗೂ ಹೆಡ್ ಕಾನ್ಸ್​ಸ್ಟೇಬಲ್​ಗಳು ಮುಂಬಡ್ತಿ ಸಿಕ್ಕಿದ್ದರೂ, ವೈಯಕ್ತಿಕ ಕಾರಣ ನೀಡಿ ಪಡೆದುಕೊಳ್ಳಲು ನಿರಾಕರಿಸಿದ್ದಾರೆ.

ಪ್ರಮೋಷನ್ ನಿರಾಕರಿಸಿದ 250ಕ್ಕೂ ಹೆಚ್ಚು ಕಾನ್​ಸ್ಟೇಬಲ್​ಗಳು
ಸಂಗ್ರಹ ಚಿತ್ರ (IANS)

By ETV Bharat Karnataka Team

Published : Aug 5, 2024, 8:19 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 250ಕ್ಕೂ ಹೆಚ್ಚು ಮಂದಿ ಕಾನ್‌ಸ್ಟೇಬಲ್​ ಹಾಗೂ ಹೆಡ್​ ಕಾನ್​ಸ್ಟೇಬಲ್​ಗಳು ವೈಯಕ್ತಿಕ ಕಾರಣ ನೀಡಿ ಪ್ರಮೋಷನ್ ನಿರಾಕರಿಸಿದ್ದಾರೆ.

ಕಳೆದೊಂದು ವರ್ಷದಿಂದ ಪೊಲೀಸ್ ಕಾನ್​ಸ್ಟೇಬಲ್‌ನಿಂದ ಎಎಸ್ಐವರೆಗೂ 1,400ಕ್ಕಿಂತ ಹೆಚ್ಚು ಸಿಬ್ಬಂದಿಗೆ ಪೊಲೀಸ್ ಇಲಾಖೆ ಮುಂಬಡ್ತಿ ನೀಡಿತ್ತು. ಈ‌ ಪೈಕಿ 250ಕ್ಕಿಂತ ಹೆಚ್ಚು ಮಂದಿ ಪೊಲೀಸರು ಮುಂಬಡ್ತಿಯನ್ನು ಇನ್ನೊಂದು ವರ್ಷದವರೆಗೆ ಬೇಡವೆಂದು ನಯವಾಗಿ ತಿರಸ್ಕರಿಸಿದ್ದಾರೆ. ವೈಯಕ್ತಿಕ ಕಾರಣಗಳೊಂದಿಗೆ ಪ್ರಮೋಷನ್ ಪಡೆದರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡ ನಂತರ ಗೊಂದಲ ಉಂಟಾಗಬಹುದಾದ ಆತಂಕವೂ ಇದಕ್ಕೊಂದು ಕಾರಣ ಎನ್ನಲಾಗುತ್ತಿದೆ.

ಅಂತರ ಜಿಲ್ಲಾ ವರ್ಗಾವಣೆ ಪಡೆಯಲು ನಗರದಲ್ಲಿ ಕಡ್ಡಾಯವಾಗಿ ಏಳು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರಬೇಕು. ಅದೇ ಸೂತ್ರದಡಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದವರ ಪೈಕಿ ಕಾನ್​ಸ್ಟೇಬಲ್​ಗಳಿಗೆ ನಿಯಾಮನುಸಾರ ಮುಂಬಡ್ತಿ ನೀಡಿದರೂ ಅಂತರ ಜಿಲ್ಲಾ ವರ್ಗಾವಣೆಗಾಗಿ ಇನ್ನೊಂದು ವರ್ಷದವರೆಗೆ ಪ್ರಮೋಷನ್ ಪಡೆಯುವುದಿಲ್ಲ ಎಂದು ಷರಾ ಬರೆದುಕೊಟ್ಟಿದ್ದಾರೆ.

ಪ್ರಮೋಷನ್ ಬೇಡ, ಟ್ರಾನ್ಸ್​ಫರ್​ ಬೇಕು:ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಕಾನ್​ಸ್ಟೇಬಲ್ ಹಾಗೂ ಹೆಡ್ ಕಾನ್​ಸ್ಟೇಬಲ್​ಗಳು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ವ್ಯಾಪ್ತಿಯಲ್ಲಿ ವರ್ಗಾವಣೆಯಾಗಬೇಕಾದರೆ ಐದು ವರ್ಷ ಹಾಗೂ ಅಂತರ ಜಿಲ್ಲಾ ವರ್ಗಾವಣೆಗೆ ಏಳು ವರ್ಷಗಳು ಕಡ್ಡಾಯವಾಗಿ ಕೆಲಸ ಮಾಡಬೇಕೆಂಬ ನಿಯಮವಿದೆ. ಸತಿ - ಪತಿ ಪೊಲೀಸ್ ದಂಪತಿಗಳ ಜಿಲ್ಲಾವಾರು ವರ್ಗಾವಣೆ ಕೋರಿದರೆ ಆದ್ಯತೆ ಮೇರೆಗೆ ವರ್ಗಾವಣೆ ಮಾಡುವಂತೆ ಸರ್ಕಾರ ಸೂಚಿಸಿತ್ತು. ಸೇವಾ ಜೇಷ್ಠತೆ (ಬಡ್ತಿ) ಬಿಟ್ಟುಕೊಡುವ ಷರತ್ತಿಗೊಳಪಟ್ಟು ನಿಯಮಾನುಸಾರ ಟ್ರಾನ್ಸ್​ಫರ್ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ವರ್ಷ 81 ಮಂದಿ ಪೊಲೀಸ್ ಪತಿ-ಪತ್ನಿಯರನ್ನು ಸರ್ಕಾರವು ವರ್ಗಾವಣೆ ಮಾಡಿದೆ‌‌‌. ಇನ್ನು ಕೆಲವರ ವರ್ಗಾವಣೆ ಪರಿಶೀಲನೆ ಹಂತದಲ್ಲಿದೆ. ಸ್ವಂತ ಕೋರಿಕೆ ಮೇರೆಗೆ 71 ಮಂದಿ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ ಜಿಲ್ಲಾ ವರ್ಗಾವಣೆಯಡಿ ಏಳು ವರ್ಷಗಳ ಸೇವೆ ಸಲ್ಲಿಸಿದ ಬಳಿಕ ವರ್ಗಾವಣೆ ಮಾಡುವಂತೆ ಕೋರಿದರೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಸರ್ಕಾರದ ಆದೇಶದಂತೆ ನಿಯಮದಡಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದರೂ ಮಾನ್ಯ ಮಾಡುತ್ತಿಲ್ಲ. ಹಿರಿತನ ಆಧಾರದ ಮೇರೆಗೆ ಹಾಗೂ ಕಡ್ಡಾಯವಾಗಿ 10 ವರ್ಷಗಳಿಗಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ಪೊಲೀಸ್ ಪತಿ-ಪತ್ನಿ ವರ್ಗಾವಣೆ ವಿಷಯದಲ್ಲಿಯೂ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.‌ ಇದರಿಂದ ಕುಟುಂಬದಲ್ಲಿ ಕೌಟುಂಬಿಕ ಕಲಹ ಹೆಚ್ಚಾಗಿ ವಿಚ್ಛೇದನಕ್ಕೆ ಕಾರಣವಾಗುತ್ತಿದೆ‌.‌ ಅಲ್ಲದೆ ದಕ್ಷತೆಯಿಂದ ಕೆಲಸ‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೊಂದ ಪೊಲೀಸರು ಆಳಲು ತೋಡಿಕೊಂಡಿದ್ದಾರೆ‌‌. ಕಳೆದವಾರ 35 ಮಂದಿ ಪೊಲೀಸರು ಮುಖ್ಯಮಂತ್ರಿ, ಗೃಹಮಂತ್ರಿಗಳಿಗೆ ಪತ್ರ ಬರೆದು ಈ ಬಗ್ಗೆ ನಿವೇದಿಸಿಕೊಂಡಿದ್ದರು.

ಈ ಬಗ್ಗೆ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೋ ಪ್ರತಿಕ್ರಿಯಿಸಿ," ಸರ್ಕಾರದ ಆದೇಶದಂತೆ ವರ್ಗಾವಣೆ ಮಾಡಲಾಗುತ್ತಿದೆ‌.‌ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಿಸಿ, ಹೆಚ್​ಸಿ ವರ್ಗಾವಣೆ ಹಾಗೂ ಮುಂಬಡ್ತಿ ತಡವಾಗಿತ್ತು.‌ ಇದೀಗ ‌ಪರಿಶೀಲಿಸಿ ಬಡ್ತಿ ಮತ್ತು ವರ್ಗಾವಣೆ ಮಾಡಲಾಗಿದೆ.‌ ಈ ಪೈಕಿ 250ಕ್ಕಿಂತ ಹೆಚ್ಚು ಪೊಲೀಸರು ಮುಂಬಡ್ತಿ ನಿರಾಕರಿಸಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೊಡವರಿಗೆ ಪ್ರತ್ಯೇಕ ಸ್ಥಾನಮಾನ: ಅಕ್ಟೋಬರ್ 21ಕ್ಕೆ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್ - Separate Status For Kodavas

ABOUT THE AUTHOR

...view details