ಬೆಳಗಾವಿ: ಜಮಾತ್–ಇ–ಇಸ್ಲಾಮಿ ಹಿಂದ್ ವತಿಯಿಂದ ದೇಶಾದ್ಯಂತ "ನೈತಿಕತೆಯೇ ಸ್ವಾತಂತ್ರ್ಯ" ಅಭಿಯಾನ ಸೆ.1ರಿಂದ 30ರ ವರೆಗೆ ಹಮ್ಮಿಕೊಂಡಿದ್ದೇವೆ ಎಂದು ಸಂಘಟನೆ ಮಹಿಳಾ ಘಟಕದ ಸಲಹಾ ಪರಿಷತ್ ಸದಸ್ಯೆ ಸಾಜೀದುನ್ನೀಸಾ ಲಾಲ್ಮಿಯ ತಿಳಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ, ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ದೇಶದ ಶಾಂತಿ ಮತ್ತು ಪ್ರಗತಿಗೆ ಧಕ್ಕೆ ಆಗುತ್ತಿದೆ. ಅಲ್ಲದೇ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗಿವೆ. ಸಮಾಜದಲ್ಲಿ ಸುರಕ್ಷತೆ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ನಮ್ಮಲ್ಲಿ ನೈತಿಕ ಮೌಲ್ಯಗಳು ಕುಸಿದಿರುವುದೇ ಆಗಿದೆ. ಆದ್ದರಿಂದ ನಿಜವಾಗಲೂ ಸ್ವಾತಂತ್ರ್ಯ ಎಂದರೇನು?. ಇದರಲ್ಲಿ ನೈತಿಕತೆ ಪಾತ್ರ ಏನಿದೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ಅಭಿಯಾನ ನಡೆಸುತ್ತಿದ್ದೇವೆ ಎಂದರು.
ಈ ವೇಳೆ ಇಂದಿನ ಮಕ್ಕಳು ಯಾವ ರೀತಿ ನೈತಿಕತೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸುತ್ತೇವೆ. ದೊಡ್ಡವರು, ಮಹಿಳೆಯರಿಗೆ ಯಾವ ರೀತಿ ಗೌರವ ನೀಡಬೇಕು. ಸದಾ ಸತ್ಯ ನುಡಿಯಬೇಕು. ನುಡಿದಂತೆ ನಡೆಯಬೇಕು. ಉತ್ತಮ ಚಾರಿತ್ರ್ಯ ಹೊಂದಿ, ದೇಶದ ಒಳ್ಳೆಯ ನಾಗರಿಕರನ್ನಾಗಿ ಮಕ್ಕಳನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.