ಮಂಗಳೂರು: ಕದ್ರಿ ಪಾರ್ಕ್ಗೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಇಂದು ಬೆಳಗ್ಗೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಮೂವರಿಂದ ಈ ಕೃತ್ಯ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಕದ್ರಿ ಪಾರ್ಕ್ಗೆ ಬರುತ್ತಿದ್ದಾಗ ಪಾರ್ಕ್ ರಸ್ತೆಯಲ್ಲೇ ತಡೆದು ಆರೋಪಿಗಳು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ; ಮೂವರ ಬಂಧನ - ನೈತಿಕ ಪೊಲೀಸ್ ಗಿರಿ
ಮಂಗಳೂರಲ್ಲಿ ವಿದ್ಯಾರ್ಥಿಗಳನ್ನು ತಡೆದು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿರುವ ಪ್ರಕರಣ ನಡೆದಿದೆ.
Published : Jan 20, 2024, 12:30 AM IST
ಕದ್ರಿ ಪಾರ್ಕ್ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ತಡೆದು ವಿಚಾರಿಸಿದ ಯುವಕರ ತಂಡ ಹಲ್ಲೆಗೆತ್ನಿಸಿದೆ. ಈ ವೇಳೆ ಜೋಡಿ ರಿಕ್ಷಾದಲ್ಲಿ ಹೋಗಲು ಯತ್ನಿಸಿದಾಗ ಮತ್ತೆ ತಂಡ ಅವರನ್ನು ಎಳೆದಾಡಿದೆ. ಆಗ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಠಾಣಾ ಪಿಎಸ್ಐ ಉಮೇಶ್ ಕುಮಾರ್ ಹಾಗೂ ತಂಡ ಘಟನೆ ನಡೆದ ಐದೇ ನಿಮಿಷಕ್ಕೆ ಸ್ಥಳಕ್ಕೆ ದೌಡಾಯಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಯುವತಿಯೊಂದಿಗಿದ್ದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಫೋಟೋ ಹಾಗೂ ವಿಡಿಯೋ ತೆಗೆದಿದ್ದಾರೆ. ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ನಿತಿನ್(18), ಹರ್ಷ(18) ಹಾಗೂ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.