ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯ ಸರ್ಕಾರಕ್ಕೆ ಚಳಿಬಿಡಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಯಾರಿ ನಡೆಸಿದೆ. ಕೆಲ ದಿನಗಳಿಂದ ವಾಲ್ಮೀಕಿ ನಿಗಮದ ಅವ್ಯವಹಾರ, ಮುಡಾ ಹಗರಣ ಸದ್ದು ಮಾಡುತ್ತಿದೆ. ಜೊತೆಗೆ ಬೆಲೆ ಏರಿಕೆ ಅಸ್ತ್ರವಾಗಿ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೈತ್ರಿಕೂಟಕ್ಕೆ ಸಿಕ್ಕಿರುವ ಪ್ರಬಲ ಅಸ್ತ್ರಗಳು:ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಹಾಗೂ ಜೆಡಿಎಸ್ ಮುಡಾ ಅಸ್ತ್ರವನ್ನು ಇಟ್ಟುಕೊಂಡಿದೆ. ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಕುಟುಂಬದ ವಿರುದ್ಧ ಆರೋಪ ಹೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಷಯ ಮಹತ್ವವನ್ನು ಪಡೆದುಕೊಂಡಿದೆ. ಸಿದ್ದರಾಮಯ್ಯ ವಿರುದ್ಧ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಬಿಜೆಪಿ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ದಾಖಲೆಗಳನ್ನು ಪ್ರತಿಪಕ್ಷದ ನಾಯಕರು ಸಂಗ್ರಹ ಮಾಡುತ್ತಿದ್ದಾರೆ. ಈ ದಾಖಲೆಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ರೂಪಿಸುವುದು ಪ್ರತಿಪಕ್ಷಗಳ ಯೋಜನೆಯಾಗಿದೆ.
ವಾಲ್ಮೀಕಿ ನಿಗಮ ಅಕ್ರಮ ಆರೋಪ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿಕ್ಕಿರುವ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಈಗಾಗಲೇ ಹಗರಣದ ವಿರುದ್ಧ ಹೋರಾಟ ನಡೆಸಿರುವ ಬಿಜೆಪಿ ಸಚಿವರ ರಾಜೀನಾಮೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕು ಎಂಬುವುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಜೊತೆಗೆ ಸದ್ಯ ಈ ಪ್ರಕರಣವನ್ನು ರಾಜ್ಯ ಪೊಲೀಸರು ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಿಬಿಐ ತನಿಖೆಗೆ ನೀಡಬೇಕು ಎಂಬುವುದು ಆಗ್ರಹವಾಗಿದೆ.
ರಾಜ್ಯದಲ್ಲಿ ಬರ ಹಾಗೂ ಬೆಳೆ ಹಾನಿಯಿಂದ ಕಳೆದ 14 ತಿಂಗಳಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ರೂಪಿಸಲು ಬಿಜೆಪಿ ಮುಂದಾಗಿದೆ. ಸರ್ಕಾರ ರೈತರ ಪರವಾಗಿ ಯೋಜನೆ ರೂಪಿಸಲು ವಿಫಲವಾಗಿದೆ. ಬರ ಪರಿಹಾರ, ಬೆಳೆ ನಷ್ಟ ಪರಿಹಾರ ಕೊಡುವಲ್ಲಿ ವಿಫಲವಾಗಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ.
ರಾಜ್ಯ ಸರ್ಕಾರದ ಮಹತ್ವದ ಯೋಜನೆ ಗ್ಯಾರಂಟಿ ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪದಿರುವ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸದನದಲ್ಲೂ ಪ್ರಸ್ತಾಪಿಸಿ ಸರ್ಕಾರಕ್ಕೆ ಛಾಟಿ ಬೀಸಲು ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಮುಂದಾಗಿದೆ. ಮತ್ತೊಂದು ಕಡೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಇಪಿ- ಟಿಎಸ್‌ಪಿ ಹಣವನ್ನು ಬಳಕೆ ಮಾಡುತ್ತಿರುವುದು ಕೂಡಾ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದೆ.