ಕರ್ನಾಟಕ

karnataka

ETV Bharat / state

ಮುಂಬೈ‌ ಪೊಲೀಸ್ ಸೋಗಿನಲ್ಲಿ ಮಹಿಳೆಗೆ ಬೆದರಿಸಿ ಹಣ ವರ್ಗಾವಣೆ: ಅಶ್ಲೀಲ ವಿಡಿಯೋ ಕರೆಗೆ ಒತ್ತಾಯಿಸಿದ ಸೈಬರ್ ಖದೀಮರು - Cyber Fraud - CYBER FRAUD

ಸೈಬರ್​ ಖದೀಮರು ಮುಂಬೈ‌ ಪೊಲೀಸ್ ಸೋಗಿನಲ್ಲಿ ಮಹಿಳೆಯನ್ನು ಬೆದರಿಸಿ, ಹಣ ವರ್ಗಾಯಿಸಿಕೊಂಡಿದ್ದಲ್ಲದೇ, ಅಶ್ಲೀಲ ವಿಡಿಯೋ ಕರೆಗೆ ಒತ್ತಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.

CYBER FRAUD
ಸೈಬರ್ ವಂಚನೆ

By ETV Bharat Karnataka Team

Published : Apr 10, 2024, 10:46 AM IST

ಬೆಂಗಳೂರು: ಮುಂಬೈ ಪೊಲೀಸರ ಸೋಗಿನಲ್ಲಿ ಮಹಿಳೆಯೊಬ್ಬರಿಗೆ ಬೆದರಿಸಿದ ಸೈಬರ್ ವಂಚಕರು, 14 ಲಕ್ಷ ರೂ. ಹಣ ವರ್ಗಾಯಿಸಿಕೊಂಡು, ಅಶ್ಲೀಲ ವಿಡಿಯೋ ಕರೆಗೆ ಒತ್ತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣ ವರ್ಗಾಯಿಸಿಕೊಂಡ ಬಳಿಕ ತಪಾಸಣೆ ನೆಪದಲ್ಲಿ ವಿಡಿಯೋ ಕರೆಗೆ ಒತ್ತಾಯಿಸಿದ್ದಾರೆ. ಆರೋಪಿಗಳು ಡಾರ್ಕ್ ವೆಬ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಕೀಲೆಯೊಬ್ಬರು ದೂರು ನೀಡಿದ್ದಾರೆ. ಅದರ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಸಾರಾಂಶ:ಏಪ್ರಿಲ್ 3ರಂದು ಫೆಡೆಕ್ಸ್‌ ಕಂಪನಿ ಪ್ರತಿನಿಧಿಯ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿ, ''ಮುಂಬೈನಿಂದ ಥಾಯ್ಲೆಂಡ್​​ಗೆ ನಿಮ್ಮ ಹೆಸರಿನಲ್ಲಿ ಕಳುಹಿಸಲಾದ ಪಾರ್ಸೆಲ್​ನಲ್ಲಿ 5 ಪಾಸ್‌ಪೋರ್ಟ್‌, 3 ಕ್ರೆಡಿಟ್ ಕಾರ್ಡ್‌, 140 ಎಂಡಿಎಂಎ ಪದಾರ್ಥಗಳಿವೆ. ಕಾನೂನು ಬಾಹಿರವಾಗಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿದೆ'' ಎಂದಿದ್ದ. ನಂತರ ಐಡಿ ಕಳ್ಳತನಕ್ಕಾಗಿ ದೂರು ದಾಖಲಿಸಲು ಮುಂಬೈನಲ್ಲಿರುವ ಸೈಬರ್ ಕ್ರೈಂ ತಂಡಕ್ಕೆ ಕರೆ ವರ್ಗಾಯಿಸುತ್ತೇವೆ ಎಂದು ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಲು ತಿಳಿಸಿದ್ದ.

ಅದರಂತೆ ದೂರುದಾರೆ ಸ್ಕೈಪ್ ಡೌನ್‌ಲೋಡ್ ಮಾಡಿ ಕರೆ ಮಾಡಿದಾಗ, ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ ವಂಚಕ, ಪಾರ್ಸೆಲ್ ಮತ್ತು ದೂರುದಾತೆ ಆಧಾರ್ ಕಾರ್ಡ್ ವಿವರಗಳ ಬಗ್ಗೆ ವಿವರಗಳನ್ನು ಕೇಳಿದ್ದಾನೆ. ನಂತರ, ಸ್ಕೈಪ್ ಕರೆಯನ್ನು ಅಭಿಷೇಕ್ ಚೌಹಾಣ್ ಎಂಬ ಹೆಸರಿನ ಹಿರಿಯ ಸಿಬಿಐ ಅಧಿಕಾರಿ ಎಂಬಾತನಿಗೆ ವರ್ಗಾಯಿಸಲಾಗಿದೆ. ಅಲ್ಲಿ ದೂರುದಾರೆಗೆ ಕ್ಯಾಮರಾ ಸ್ವಿಚ್ ಆನ್ ಮಾಡಲು ತಿಳಿಸಿ, ಆಧಾರ್ ಸಂಖ್ಯೆ, ವಿಳಾಸದಂತಹ ಸಾಮಾನ್ಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಮತ್ತು ಇದು ಮಾನವ ಕಳ್ಳಸಾಗಣೆ, ಹಣ ವರ್ಗಾವಣೆ ಮತ್ತು ಗುರುತಿನ ಕಳ್ಳತನ ಪ್ರಕರಣಗಳಿವೆ ಎಂದು ತಿಳಿಸುತ್ತಾ ಬ್ಯಾಂಕ್ ಖಾತೆಯ ವಿವರಗಳಾದ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್, ವಾರ್ಷಿಕ ಆದಾಯ, ಪ್ರತಿ ತಿಂಗಳ ಆದಾಯ ಹಾಗೂ ಹೂಡಿಕೆಗಳು ಮತ್ತಿತರ ವಿವರಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಡಮ್ಮಿ ಖಾತೆಗೆ ಹಣ ವರ್ಗಾವಣೆಗೆ ಸೂಚನೆ:ಇಡೀ ದಿನ ಕ್ಯಾಮರಾವನ್ನು ಸ್ವಿಚ್ ಆನ್ ಮಾಡಿಡಲು ಮತ್ತು ಪರದೆಯನ್ನು ಹಂಚಿಕೊಳ್ಳಲು ಸೂಚಿಸಿದ ವಂಚಕರು, ಕ್ಯಾಮರಾ ಆನ್ ಮಾಡಿಟ್ಟುಕೊಂಡೇ ಮಲಗಲು ಸೂಚಿಸಿದ್ದಾರೆ. ಮರುದಿನ ಏಪ್ರಿಲ್ 4 ರಂದು ರಾತ್ರಿ 11:30 ಕ್ಕೆ ಕರೆ ಮಾಡಿದ್ದ ಅಭಿಷೇಕ್ ಚೌಹಾಣ್ ಹೆಸರಿನ ವ್ಯಕ್ತಿ, ಕಾನೂನುಬದ್ಧತೆಯನ್ನು ಪರಿಶೀಲಿಸಲು ದೂರುದಾರೆಯ ಖಾತೆಯಲ್ಲಿದ್ದ ಎಲ್ಲ ಹಣವನ್ನು ಖಾತೆಯಿಂದ ಅವರ ಸ್ವಂತ ಡಮ್ಮಿ ಖಾತೆಗೆ ವರ್ಗಾಯಿಸಲು ಸೂಚಿಸಿದ್ದ. ಅದರಂತೆ ದೂರುದಾರೆ ತನ್ನ ಖಾತೆಯಲ್ಲಿದ್ದ 10.78 ಲಕ್ಷ ರೂ. ಹಣವನ್ನು ಆರೋಪಿ ಹೇಳಿದ ನಿತಿನ್ ಜೋಸೆಫ್ ಎಂಬ ಖಾತೆಗೆ ವರ್ಗಾಯಿಸಿದ್ದರು. ಬಳಿಕ ದೂರುದಾರೆಗೆ ಮನೆಯಲ್ಲಿ ಕುಳಿತು ಮುಂದಿನ ಸೂಚನೆಗಳಿಗಾಗಿ ಕಾಯುವಂತೆ ಆರೋಪಿ ಸೂಚಿಸಿದ್ದ.

ಬಿಟ್‌ಕಾಯಿನ್‌ ಖರೀದಿಗೆ ಯತ್ನ: ಬಳಿಕ 1-2 ಗಂಟೆಗಳ ನಂತರ ಕರೆ ಮಾಡಿದ್ದ ವಂಚಕ 'ನಿಮ್ಮ ಕೆಲವು ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ದೋಷಗಳಿವೆ ಎನ್ನುತ್ತಾ ಬಿಟ್‌ಗೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸುವಂತೆ ತಿಳಿಸಿದ್ದ. ಅದರಲ್ಲಿ 5000USD ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಲು ಪ್ರಯತ್ನಿಸಿದ್ದು, ಅಪ್ಲಿಕೇಶನ್‌ನಿಂದ ನಿರಾಕರಿಸಲ್ಪಟ್ಟಿದೆ. ಬಳಿಕ ದೂರುದಾರೆಯ ಕ್ರೆಡಿಟ್ ಕಾರ್ಡ್​​ನ ಮುಂಭಾಗ ಮತ್ತು ಹಿಂಭಾಗದ ಫೋಟೋ ಹಂಚಿಕೊಳ್ಳಲು ಆರೋಪಿ‌ ತಿಳಿಸಿದ್ದ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಶ್ಲೀಲ ವಿಡಿಯೋಗೆ ಒತ್ತಾಯ:ಎಲ್ಲ ಹಣವನ್ನು ತೆಗೆದುಕೊಂಡ ನಂತರ ಕರೆ ಮಾಡಿದ್ದ ಅಭಿಷೇಕ್ ಚೌಹಾಣ್, ನಾರ್ಕೋಟಿಕ್ ಡ್ರಗ್ಸ್ ಪರೀಕ್ಷೆಗೆ ಸಿದ್ಧರಾಗುವಂತೆ ತಿಳಿಸುತ್ತಾ ಸ್ಕೈಪ್ ಕ್ಯಾಮರಾ ಮುಂದೆ ವಿವಸ್ತ್ರವಾಗುವಂತೆ ಮತ್ತು ಅಶ್ಲೀಲ ವಿಡಿಯೋಗಳನ್ನು ಮಾಡುವಂತೆ ನನಗೆ ಒತ್ತಾಯಿಸಿದ್ದಾನೆ. ಇಲ್ಲದಿದ್ದರೆ, ಡ್ರಗ್ಸ್ ಪ್ರಕರಣದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಬಂಧಿಸುತ್ತೇವೆ ಎಂದು ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಅಲ್ಲದೇ, ಏಪ್ರಿಲ್ 5 ರಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋವನ್ನು ಡಾರ್ಕ್ ವೆಬ್ ಸೇರಿದಂತೆ ಬಹು ಜನರಿಗೆ ಮಾರಾಟ ಮಾಡುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಾಯಿ - Children Murder

ABOUT THE AUTHOR

...view details