ಬೆಂಗಳೂರು:ನರೇಂದ್ರ ಮೋದಿ, ಅಮಿತ್ ಶಾರವರೇ ಇಡಿ ಮೂಲಕ ಎಲ್ಲವನ್ನೂ ಮಾಡಿಸುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ವಿರುದ್ಧ ಪ್ರಕರಣಕ್ಕೆ ಕೋರ್ಟ್ ಸ್ಟೇ ಕೊಡುವುದು ಬೇರೆ ವಿಚಾರ. ಆದರೆ, ರಾಜ್ಯಕ್ಕೆ ಇಡಿ ಬಂದಿರುವ ಉದ್ದೇಶವೇನು. ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ತೆಗೆಯಬೇಕು. ನಮ್ಮ ಮುಖ್ಯಮಂತ್ರಿಗಳನ್ನು ಅರೆಸ್ಟ್ ಮಾಡಿಸಬೇಕು ಅನ್ನೋದು ಅವರ ಉದ್ದೇಶ. ಸಂಪೂರ್ಣ ದೇಶದಲ್ಲೇ ಇಡಿ ಇದೇ ರೀತಿ ಕೆಲಸ ಮಾಡ್ತಾ ಇದೆ. ಇಡಿ ಬಿಜೆಪಿ ಅಂಗ ಸಂಸ್ಥೆಯಾಗಿ ಕೆಲಸ ಮಾಡ್ತೀರೋದು ಜಗತ್ತಿಗೆ ತಿಳಿದಿರುವ ವಿಚಾರ ಎಂದು ಆರೋಪಿಸಿದರು.
ಆದರೆ, ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲ ಅನ್ನೋದನ್ನು ನಾವು ಸಾಬೀತು ಮಾಡಬೇಕಿದೆ. ಆ ಮೂಲಕ ದೇಶಕ್ಕೆ ಮೆಸೇಜ್ ಪಾಸ್ ಮಾಡ ಬೇಕಿದೆ. ದೂರು ಕೊಟ್ಟಿರುವ ಆ ಅಧಿಕಾರಿ ಯಾರೋ ಏನೋ ನಮಗೆ ಗೊತ್ತಿಲ್ಲ. ಅಧಿಕಾರಿ ದೂರು ಕೊಡದಿದ್ರೂ, ನಮ್ಮ ಹತ್ತಿರ ಮಾಹಿತಿ ಇದೆ. ಯಾರನ್ನೆಲ್ಲ ಇಡಿ ಅವರು ಕರೆಸಿಕೊಂಡಿದ್ದಾರೋ ಅವರೆಲ್ಲರ ಮೇಲೆ ಒತ್ತಡ ತರಲಾಗ್ತಿದೆ. ಸಿಎಂ ಹೆಸರು ಹೇಳಿ, ಸಚಿವರ ಹೆಸರು ಹೇಳಿ ಅಂತ ಒತ್ತಡ ಹಾಕುತ್ತಿದ್ದಾರೆ. ನಾನೇನು ನಾಗೇಂದ್ರ ಅವರ ವಕಾಲತ್ತು ವಹಿಸುತ್ತಿಲ್ಲ ಎಂದು ಕಿಡಿಕಾರಿದರು.
ಎಸ್ಐಟಿ, ಸಿಬಿಐ ಬಿ.ನಾಗೇಂದ್ರ ಅವರ ಮೇಲೆ ಯಾವುದೇ ಎಫ್ಐಆರ್ ಹಾಕಿಲ್ಲ. ಆದರೆ, ಯಾವುದೇ ಜಾರ್ಜ್ಶೀಟ್ ಇಲ್ಲದೇ ಇಡಿ ಅವರನ್ನು ಅರೆಸ್ಟ್ ಮಾಡಿ ಒಳಗೆ ಹಾಕಿಕೊಂಡಿದ್ದಾರೆ. ದೇಶದಲ್ಲಿ ಇಡಿ ಉಪಯೋಗಿಸಿ ಕೊಂಡು ಯಾರನ್ನಾದರೂ ಮುಗಿಸುವ ತಂತ್ರಕ್ಕೆ ಬಿಜೆಪಿ ಮೊರೆಹೋಗಿದೆ. ಇದೆಲ್ಲ ಮೊದಲೇ ಫಿಕ್ಸ್ ಆಗಿರೋ ಸಂಚು. ಇಡಿ ಅವರಿಂದ ಸಿಎಂಗೆ ನೋಟಿಸ್ ಕೊಡಿಸೋದು. ಬನ್ನಿ ತನಿಖೆಗೆ ಅಂತ ಕರೆದು ಅರೆಸ್ಟ್ ಮಾಡಿಸೋದು. ಆಮೇಲೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸೋದು. ಇದೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.