ಬೆಂಗಳೂರು: "ನಾನು ಡಿ.19ರ ರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ. ಅದರಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರ ಮತ್ತು ಹಲ್ಲೆಗೆ ಕುಮ್ಮಕ್ಕು ಕೊಟ್ಟವರ ವಿವರ ಕೊಟ್ಟಿದ್ದೇನೆ. ಇವತ್ತಿನವರೆಗೆ ಎಫ್‍ಐಆರ್ ಮಾಡಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಇವೆಲ್ಲ ಅಂತೆ -ಕಂತೆಗಳು, ನೆಗೆಟಿವ್ ನರೇಟಿವ್ ಸೃಷ್ಟಿಸಲು ಮಾಡಿರುವ ಒಂದು ಷಡ್ಯಂತ್ರದ ಭಾಗ. ಈ ಥರದ ಷಡ್ಯಂತ್ರವನ್ನು ದುರುದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಎಫ್‍ಎಸ್‍ಎಲ್ ಆಗಿಲ್ಲ, ತನಿಖೆಯೇ ಆಗಿಲ್ಲ, ಸುದ್ದಿ ಪ್ಲಾಂಟ್ ಆಗುವುದಾದರೆ, ಇದರ ಹಿಂದೆ ದುರುದ್ದೇಶ ಇದೆ. ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ" ಎಂದು ಆರೋಪಿಸಿದರು.
"ಈ ದೇಶದಲ್ಲಿ ನನಗೊಂದು, ಬೇರೆಯವರಿಗೆ ಒಂದು ಸಂವಿಧಾನ ಇಲ್ಲ, ನನಗೊಂದು ಬೇರೆಯವರಿಗೆ ಇನ್ನೊಂದು ಕಾನೂನಿಲ್ಲ. ನನ್ನ ವಿರುದ್ಧ ಕೊಟ್ಟ ದೂರು ಕ್ಷಣಮಾತ್ರದಲ್ಲಿ ಎಫ್‍ಐಆರ್ ಆಗುತ್ತದೆ. ನಾನು ಕೊಟ್ಟ ದೂರು ಎಫ್‍ಐಆರ್ ಆಗುವುದಿಲ್ಲ ಎಂದಾದರೆ, ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ. ಇವರು ನಡೆಸುವ ತನಿಖೆ ಪ್ರಾಮಾಣಿಕವಾಗಿ ಇರುವುದಾಗಿ ಹೇಗೆ ಭಾವಿಸುತ್ತೀರಿ" ಎಂದು ಪ್ರಶ್ನಿಸಿದರು.
"ಮುಖಭಂಗ ಆಗುವುದನ್ನು ತಪ್ಪಿಸಲು ಸರ್ಕಾರದಲ್ಲಿರುವ ಕೆಲವರು ಅಡ್ಡದಾರಿ ಹಿಡಿದಿದ್ದಾರೆ. ಅಂತಿಮ ಜಯ ಸತ್ಯಮೇವ ಜಯತೇ. ಅಂತಿಮ ಜಯ ನನ್ನದೇ. ತನಿಖೆಯ ಹಂತದಲ್ಲಿ ನಾನು ವಿಷಯಗಳನ್ನು ವಿವರವಾಗಿ ಹೇಳಲಾಗದು, ನಾನೇನು ಹೇಳಬೇಕೋ ಅದನ್ನು ಸಭಾಪತಿಗಳಿಗೆ ಹೇಳಿದ್ದೇನೆ. ಸಭಾಪತಿಗಳು ದಾಖಲೆಗಳನ್ನು ಪರಿಶೀಲಿಸಿಯೇ ರೂಲಿಂಗ್ ಕೊಟ್ಟಿದ್ದಾರೆ. ಆ ರೂಲಿಂಗ್ ಪ್ರಶ್ನಿಸಿದರೆ ಅದು ಸಂವಿಧಾನವನ್ನು ಪ್ರಶ್ನಿಸಿದಂತೆ" ಎಂದರು.