ಕರ್ನಾಟಕ

karnataka

By ETV Bharat Karnataka Team

Published : 7 hours ago

Updated : 6 hours ago

ETV Bharat / state

ವಿಧಾನ ಪರಿಷತ್ ಟಿಕೆಟ್: ಬಿಜೆಪಿಯ 15 ಆಕಾಂಕ್ಷಿಗಳು, ಕಾಂಗ್ರೆಸ್​ನ ಐವರ ಮಧ್ಯೆ ಪೈಪೋಟಿ - MLC Byelection

ಕೋಟಾ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್‌ಗಾಗಿ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಪೈಪೋಟಿ ಶುರುವಾಗಿದೆ.

ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಗಳು
ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಗಳು (ETV Bharat)

ಮಂಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಅಕ್ಟೋಬರ್ 21ರಂದು ಉಪಚುನಾವಣೆ ನಿಗದಿಯಾಗಿದೆ. ಈ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​​ನಲ್ಲಿ ಟಿಕೆಟ್​​ಗಾಗಿ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತದಾನ ಮಾಡಲಿರುವ ಈ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಿಜೆಪಿಗೆ ಗೆಲುವು ನಿಶ್ಚಿತ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಸಂಖ್ಯಾಬಲ ಕಡಿಮೆ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಉತ್ಸಾಹದಲ್ಲಿದೆ.

ವಿಧಾನ ಪರಿಷತ್ ಉಪಚುನಾವಣೆ (ETV Bharat)

ಬಿಜೆಪಿಯಿಂದ 15 ಆಕಾಂಕ್ಷಿಗಳು:ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮಧ್ವರಾಜ್, ಉದಯಕುಮಾರ್ ಶೆಟ್ಟಿ, ಸತೀಶ್ ಕುಂಪಲ ಸೇರಿದಂತೆ 15 ಮಂದಿ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಈ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್​​ಗೆ ಕಳುಹಿಸಿ ಕೊಡಲಾಗಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, "ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಿಎಂ‌ ಬಸವರಾಜ ಬೊಮ್ಮಾಯಿ ಮತ್ತು ಪ್ರೀತಮ್ ಗೌಡ ಅವರಿಂದ ಅಭಿಪ್ರಾಯ ಸಂಗ್ರಹವಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಅಭ್ಯರ್ಥಿ ಯಾರೇ ಆದರೂ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಮತದಾರರ ಪಟ್ಟಿಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಜಾಸ್ತಿಯಿರುವ ಕಾರಣ ಬಿಜೆಪಿ ಅಭ್ಯರ್ಥಿ ಗೆದ್ದು ಬರುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​​ನಿಂದ ಐವರು ಆಕಾಂಕ್ಷಿಗಳು:ವಿಧಾನ ಪರಿಷತ್ಉಪಚುನಾವಣೆಗೆ ಕಾಂಗ್ರೆಸ್​​ನಿಂದ ಸ್ಪರ್ಧಿಸಲು ಐವರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆಯವರೇ ಆಕಾಂಕ್ಷಿಗಳಾಗಿದ್ದು, ಮಾಜಿ ಜಿ.ಪಂ. ಅಧ್ಯಕ್ಷ ರಾಜು ಪೂಜಾರಿ, ರಾಜು ಕಾರ್ಕಳ, ಭುಜಂಗ ಶೆಟ್ಟಿ ಸೇರಿದಂತೆ ಐವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

'ಈಟಿವಿ ಭಾರತ' ಜೊತೆಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, "ಈ ಉಪಚುನಾವಣೆಗ ಕಾಂಗ್ರೆಸ್ ಸಜ್ಜಾಗಿದ್ದು, ಎರಡು ಸುತ್ತಿನ ಮಾತುಕತೆ ನಡೆದಿದೆ. ಮಂಗಳೂರಿನ ಕೆಪಿಸಿಸಿ ಎಲ್ಲ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಮತ್ತೊಂದು ಸಭೆಯನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾಡಲಾಗಿತ್ತು. ಈ ಚುನಾವಣೆ ಗೆಲ್ಲಲು ಶ್ರಮಿಸುತ್ತೇವೆ. ಟಿಕೆಟ್​ಗಾಗಿ ಐವರು ಅರ್ಜಿ ನೀಡಿದ್ದಾರೆ. ಇನ್ನೊಮ್ಮೆ ಸಭೆ ನಡೆಸಿ ಅರ್ಜಿ ಹಾಕಿದವರಿಗೊ ಅಥವಾ ಬೇರೆ ಯಾರಿಗಾದರೂ ಕೊಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ" ಎಂದರು.

ದ.ಕ.ದಲ್ಲಿ 3,551, ಉಡುಪಿಯಲ್ಲಿ 2,486 ಮತದಾರರು:ದ.ಕ. ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರದ ವ್ಯಾಪ್ತಿಗೆ ದ.ಕ. ಮತ್ತು ಉಡುಪಿ ಜಿಲ್ಲೆ ಸೇರಿದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಎರಡು ಜಿಲ್ಲೆಗಳ ಸ್ಥಳೀಯಾಡಳಿತಗಳ ಮತದಾರರು ಮತ ಚಲಾಯಿಸಲಿದ್ದಾರೆ. ದ.ಕ.ದಲ್ಲಿ ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಸೇರಿ 234 ಸ್ಥಳೀಯ ಸಂಸ್ಥೆಗಳಲ್ಲಿ 3,551 ಮಂದಿ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಉಡುಪಿಯಲ್ಲಿ 158 ಸ್ಥಳೀಯ ಸಂಸ್ಥೆಗಳಲ್ಲಿ 2,486 ಮಂದಿ ಮತ ಚಲಾಯಿಸಲಿದ್ದಾರೆ‌. ಒಟ್ಟು 6,037 ಜನರು ಮತ ಹಕ್ಕು ಹೊಂದಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೆ.26 ರಿಂದ ಅ.3ರವರೆಗೆ ಅವಕಾಶವಿದೆ. ಅ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.7ರಂದು ನಾಮಪತ್ರ ವಾಪಸ್‌ಗೆ ಕೊನೆ ದಿನ. ಅ.21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ಹಾಗೂ ಅ.24ರಂದು ಮತ ಎಣಿಕೆ ನಡೆಯಲಿದೆ.

ಈ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಇದೀಗ ಅವರು ಸಂಸದರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕ್ಷೇತ್ರ ಉಳಿಸಿಕೊಳ್ಳುತ್ತದೆಯೋ ಅಥವಾ ಕಾಂಗ್ರೆಸ್ ಅಚ್ಚರಿಯ ಗೆಲುವು ಸಾಧಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ:ಚುನಾವಣೆ ವೇಳೆ ಕೋಮುದ್ವೇಷದ ಪೋಸ್ಟ್​​: ನಡ್ಡಾ, ಅಮಿತ್ ಮಾಳವೀಯ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ - High court stays against BJP case

Last Updated : 6 hours ago

ABOUT THE AUTHOR

...view details