ಮಂಗಳೂರು(ದಕ್ಷಿಣ ಕನ್ನಡ):ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಿಜೆಪಿಗೆ ಕಂಟೈನರ್‌ನಲ್ಲಿ ದುಡ್ಡು ಬಂದಿರುವುದೇ ಕಾರಣ. ಚುನಾವಣೆಯಲ್ಲಿ ಗೆಲ್ಲಲು ನೋಟು ಎಣಿಸುವ ಮಶಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲೂ ಬಿಜೆಪಿ ಅದೇ ರೀತಿ ದುಡ್ಡು ಖರ್ಚು ಮಾಡಿತ್ತು. ಆದರೆ ಜನ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಮತ್ತು ಜೆಡಿಎಸ್ ಚುನಾವಣೆ ಗೆಲ್ಲಲು ಏನೆಲ್ಲಾ ಮಾಡಿತ್ತೋ, ಅದನ್ನು ನಾವು ಮಾಡಿದ್ದೇವೆ. ಆದರೆ ನಮ್ಮ ಕಾರ್ಯಕ್ರಮಗಳಿಗೆ ಜನರು ಬೆಂಬಲ ಸೂಚಿಸಿದ್ದಾರೆ ಎಂದರು.
ಬೇರೆ ಬೇರೆ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದಾಗ ಮತದಾರರಿಂದ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಚುನಾವಣೆಗೂ ಮೊದಲು ಬಿಜೆಪಿ ಗ್ಯಾರಂಟಿ, ವಕ್ಫ್ ವಿಚಾರದಲ್ಲಿ ಅಪಪ್ರಚಾರ ಮಾಡಿ ಸುಳ್ಳು ವದಂತಿ ಹಬ್ಬಿಸಿತ್ತು. ಚುನಾವಣೆಗಾಗಿ ಜಾರಿ ನಿರ್ದೇಶನಾಯ (ಇ.ಡಿ) ಬಳಸಿಕೊಂಡಿದ್ದರು. ಜಾರ್ಖಂಡ್ನಲ್ಲಿ ನುಸುಳುಕೋರರು ಬಂದಿದ್ದಾರೆ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿ ಸೈನಿಕರಿಗೆ ಅವಮಾನ ಮಾಡಿತ್ತು. ಆದರೆ ಕರ್ನಾಟಕ ಮತ್ತು ಜಾರ್ಖಾಂಡ್‌ನಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಯಶಸ್ಸು ದೊರಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಪಕ್ಷ ಜಯಿಸಿದೆ. ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಒಂದನ್ನು ಉಳಿಸಿಕೊಂಡು, ವಿಪಕ್ಷದ ಹಿಡಿತದಲ್ಲಿದ್ದ ಎರಡನ್ನು ಗೆದ್ದುಕೊಂಡು ಅಭೂತಪೂರ್ವ ಯಶಸ್ಸು ಗಳಿಸಿದ್ದು, ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.