ಬೆಂಗಳೂರು: "ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17 ಟಿಎಂಸಿ ನೀರು ಹರಿಸುವ ಮಹತ್ವದ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ಮುಂದಿನ ಬಜೆಟ್‍ನಲ್ಲಿ 500 ಕೋಟಿ ರೂ. ಮೀಸಲಿರಿಸಬೇಕು" ಎಂದು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂದು ಪ್ರಶ್ನೋತ್ತರ ವೇಳೆ ಚಿಕ್ಕನಾಯಕನಹಳ್ಳಿ ಕ್ಷೇತ್ರ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರಶ್ನೆ ಕೇಳಿ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, "856 ಕೋಟಿ ರೂ.ಗಳ ಮಂಜೂರಾತಿ ನೀಡಲಾಗಿದೆ. ಕೆಲವು ಕಡೆ ರೈತರು ವಿರೋಧ ಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇದೆ. ಹಾಗಾಗಿ, ಭೂಸ್ವಾಧೀನ ವಿಳಂಬವಾಗುತ್ತಿದೆ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ. ಟಿ.ಬಿ. ಜಯಚಂದ್ರ ಅವರು, ತಮ್ಮ ಕ್ಷೇತ್ರಕ್ಕೆ ನೀರು ತೆಗೆದುಕೊಂಡು ಹೋಗಲು ಶ್ರಮಿಸಿದ್ದಾರೆ. ಅವರ ಬೇಡಿಕೆಯಂತೆ ಭೂ ಸ್ವಾಧೀನಕ್ಕೆ ವಿಶೇಷ ಹಣ ನೀಡಲು ಪರಿಶೀಲಿಸುತ್ತೇವೆ" ಎಂದು ಭರವಸೆ ನೀಡಿದರು.
ಒಣಗುತ್ತಿವೆ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳು: ಕೆಸಿ ವ್ಯಾಲಿಯಿಂದ ಹರಿಯುವ ನೀರು ಕಡಿಮೆ ಆಗಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರಿಲ್ಲದೆ ಒಣಗುತ್ತಿವೆ ಎಂದು ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು. ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರ್ಕಾರ ರೂಪಿಸಿದ ಕೆಸಿ ವ್ಯಾಲಿ ಯೋಜನೆಯಿಂದ ಬಯಲು ಸೀಮೆಯ ಜಿಲ್ಲೆಗಳ ಕೆರೆಗಳಿಗೆ ನೀರು ಹರಿಯುತ್ತಿತ್ತು. ಅಂತರ್ಜಲ ಹೆಚ್ಚಾಗಿತ್ತು. ಪ್ರಸಕ್ತ ವರ್ಷ ಮಳೆಯಿಂದಾಗಿ ನೀರಿನ ಲಭ್ಯತೆ ಕಡಿಮೆ ಇದೆ. ಕೆಸಿ ವ್ಯಾಲಿಯಿಂದಲೂ ನೀರು ಬರುತ್ತಿಲ್ಲ. ಹಾಗಾಗಿ ಕೆರೆಗಳು ಒಣಗುತ್ತಿವೆ ಎಂದು ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು, ಬೆಂಗಳೂರು ನೀರು ಸರಬರಾಜು ಮಂಡಳಿ ಪೂರೈಸುವ ನೀರನ್ನು ನಾವು ಕೆರೆಗೆ ಹರಿಸುತ್ತೇವೆ. ಈ ಬಾರಿ ಮಳೆಯ ಕೊರತೆಯಿದೆ, ಹಾಗಾಗಿ ನೀರು ಕಡಿಮೆಯಾಗಿದೆ. ಶಾಸಕರು ಹೇಳಿದಂತೆ ಎರಡನೇ ಹಂತದ ಕಾಮಗಾರಿಗಳನ್ನು ಚುರುಕುಗೊಳಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಭಾರತ್ ರೈಸ್ ಹೆಸರಲ್ಲಿ ದೇಶವನ್ನ ಆರ್ಥಿಕ ದಿವಾಳಿಗೆ ನೂಕಲಾಗುತ್ತಿದೆ: ಸಚಿವ ಮುನಿಯಪ್ಪ