ಕರ್ನಾಟಕ

karnataka

ETV Bharat / state

ಮುಡಾ: ರಾಜ್ಯಪಾಲರ ಶೋಕಾಸ್‌ ನೋಟಿಸ್​ಗೆ ಸಿಎಂ ಸ್ಪಂದಿಸದಿದ್ದರೆ ರಾಷ್ಟ್ರಪತಿಗೆ ದೂರು- ಶಾಸಕ ಶ್ರೀವತ್ಸ - BJP MLA Srivatsa - BJP MLA SRIVATSA

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ಇಂದು ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮೈಸೂರು ನಗರದ ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಅವರು ಮುಡಾ ಹಗರದ ಕುರಿತು ಮಾತನಾಡಿದರು.

Protest led by MLA Shrivatsa
ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ (ETV Bharat)

By ETV Bharat Karnataka Team

Published : Aug 12, 2024, 3:29 PM IST

Updated : Aug 12, 2024, 4:22 PM IST

ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ (ETV Bharat)

ಮೈಸೂರು: "ರಾಜ್ಯಪಾಲರು ನೀಡಿರುವ ಶೋಕಾಸ್​ ನೋಟಿಸ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ಉತ್ತರ ನೀಡದೇ ಹೋದರೆ, ಮುಡಾ ಪ್ರಕರಣದ ಬಗ್ಗೆ ರಾಷ್ಟ್ರಪತಿಗೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ" ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.

ಇಂದು ಮೈಸೂರು ನಗರದ ಬಸ್‌ ನಿಲ್ದಾಣದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅರಾಜಕತೆ ಹಾಗೂ ಹಿಂದೂಗಳ ಮೇಲಿನ ಆಕ್ರಮಣವನ್ನು ಖಂಡಿಸಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಡಾ ವಿಚಾರದಲ್ಲಿ 5,000 ಸಾವಿರ ಕೋಟಿ ರೂ. ಹಗರಣವಾಗಿದೆ. ಮುಖ್ಯಮಂತ್ರಿಗಳ ಕುಟುಂಬದ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿರುವ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ನೋಟಿಸ್‌ ನೀಡಿದ್ದರು. ಸರ್ಕಾರದ ವತಿಯಿಂದ ಸರಿಯಾದ ಉತ್ತರ ನೀಡಿಲ್ಲ. ಆದ್ದರಿಂದ ಮುಡಾ ಪ್ರಕರಣವನ್ನು ರಾಷ್ಟ್ರಪತಿಗಳ ಅಂಗಳಕ್ಕೆ ತೆಗೆದುಕೊಂಡು ಹೋಗಿ, ಅವರ ಬಳಿ ಈ ಪ್ರಕರಣವನ್ನು ಇಡಿ ಅಥವಾ ಇತರ ತನಿಖಾ ಸಂಸ್ಥೆಗಳಿಂದ ತನಿಖೆಗೆ ವಹಿಸುವಂತೆ ಮನವಿ ಮಾಡುತ್ತೇವೆ. ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಹಾಗೂ ಸೈಟ್‌ ವಾಪಸ್‌ ನೀಡಿದರೆ ಮಾತ್ರ ನಾವು ರಾಷ್ಟ್ರಪತಿ ಅಂಗಳಕ್ಕೆ ಇದನ್ನು ಕೊಂಡೊಯ್ಯುವುದಿಲ್ಲ" ಎಂದರು.

ರಾಜವಂಶಸ್ಥರ ಅಧಿಕಾರ ಮೊಟಕಿಗೆ ಸರ್ಕಾರ ಸಂಚು:"ಚಾಮುಂಡಿ ಬೆಟ್ಟ ಪ್ರಾಧಿಕಾರದ ಹೆಸರಿನಲ್ಲಿ ಸರ್ಕಾರ ರಾಜವಂಶಸ್ಥರ ಅಧಿಕಾರವನ್ನು ಮೊಟಕುಗೊಳಿಸಲು ಸಂಚು ರೂಪಿಸಿದ್ದು, ಅವರಿಗೆ ಬೇಕಾದ ಸದಸ್ಯರನ್ನು ನೇಮಕ ಮಾಡಿಕೊಂಡು ಪ್ರಾಧಿಕಾರದ ಮೂಲಕ ತಿದ್ದುಪಡಿ ಮಾಡಹೊರಟಿದೆ. ಅದಕ್ಕೆ ಹೈಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಬೆಟ್ಟದ ವಿಚಾರದಲ್ಲಿ ಸರ್ಕಾರ ವಿವೇಚನೆಯಿಂದ ನಡೆದುಕೊಂಡಿಲ್ಲ" ಎಂದು ಹೇಳಿದರು.

ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಮೌನ ಪ್ರತಿಭಟನೆ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ದಾಳಿಯನ್ನು ಖಂಡಿಸಿ ಶಾಸಕ‌ ಶ್ರೀವತ್ಸ ನೇತೃತ್ವದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮೈಸೂರು ಮಹಾನಗರ ಪಾಲಿಕೆಯಿಂದ ಪ್ರಾರಂಭಿಸಿ ನಗರ ಬಸ್ ನಿಲ್ದಾಣದವರೆಗೆ ಬಿತ್ತಿ ಪತ್ರವನ್ನು ಹಿಡಿದು ಮೌನ ಮೆರವಣಿಗೆ ನಡೆಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಶ್ರೀವತ್ಸ, "ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಹಾಗೂ ಆ ದೇಶದ ಸಂಕಷ್ಟಕ್ಕೆ ದೇಶದ ಜನರನ್ನು ನಿಲ್ಲುವಂತೆ ಪ್ರೇರೇಪಿಸುವ ಜತೆಗೆ ಸರ್ಕಾರದ ಗಮನ ಸೆಳೆಯಲು ಇಂದು ಇಡೀ ದಿನ ಜನ ಜಾಗೃತಾ ಕಾರ್ಯಕ್ರಮ ರೂಪಿಸಿದ್ದೇವೆ. ನನ್ನ ಕ್ಷೇತ್ರದ 19 ವಾರ್ಡ್​ಗಳಲ್ಲಿ ಪ್ರತಿ ವಾರ್ಡ್​ನ ಮೂರು ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ಪ್ರತಿಭಟನೆ ಆಯೋಜಿಸಿದ್ದೇವೆ. ಸರ್ಕಾರ ಬಾಂಗ್ಲಾದೇಶದಲ್ಲಿ ಇರುವ ಹಿಂದೂಗಳನ್ನು ರಕ್ಷಿಸಬೇಕೆಂದು ಕೋರುತ್ತೇವೆ" ಎಂದು ಹೇಳಿದರು.

ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ ಅರಸ್, ಪ್ರಧಾನ ಕಾರ್ಯದರ್ಶಿ ಜೈಶಂಕರ, ಜಯರಾಮ್, ನಗರ ಉಪಾಧ್ಯಕ್ಷ ಎಂ.ಆರ್. ಬಾಲಕೃಷ್ಣ, ಮೈಸೂರು ನಗರ ಮಾಜಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿಲ್ಲಯ್ಯ, ಚೇತನ್, ಚಂದ್ರಶೇಖರ್, ವಾದಿರಾಜ ಬಲ್ಲಾಳ್, ಹರೀಶ್, ರವಿ, ಕೀರ್ತಿ, ಕಿಶೋರ್ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

ಹಿತರಕ್ಷಣ ಸಮಿತಿಯಿಂದಲೂ ಪ್ರತಿಭಟನೆ: ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ಬಾಂಗ್ಲಾದೇಶ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಚಾಮುಂಡಿಪುರ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್ ಹೌಸ್ ವೃತ್ತ, ನ್ಯಾಯಾಲಯದ ಮುಂಭಾಗ, ಸೇರಿ ನಗರದ ಪ್ರಮುಖ 30 ವೃತದಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಮೌನವಾಗಿ ಪ್ರತಿಭಟಿಸಲಾಯಿತು.

ಹಿಂದೂ ಹಿತರಕ್ಷಣ ಸಮಿತಿಯ ಸಂಚಾಲಕ ರಂಗಸ್ವಾಮಿ ಮಾತನಾಡಿ, "ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನೀಯ. ಬಾಂಗ್ಲಾದಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿ ನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಅಲ್ಲಿನ ಸೇನೆಯೂ ಇದನ್ನು ತಡೆಯುತ್ತಿಲ್ಲ" ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೂ ಹಿತರಕ್ಷಣ ಸಮಿತಿ ಸಂಚಾಲಕರಾದ ಮಹೇಶ್, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್, ಚಂದ್ರು ಕುಮಾರ್, ಬೈರತಿ ಲಿಂಗರಾಜು, ಶ್ರೀನಿವಾಸ್, ಎಸ್ ಎನ್ ರಾಜೇಶ್ ಸೇರಿ ಇನ್ನಿತರರು ಭಾಗವಹಿಸಿದರು.

ಇದನ್ನೂ ಓದಿ:LIVE:ಮೈಸೂರಿನಲ್ಲಿ ಬಿಜೆಪಿ - ಜೆಡಿಎಸ್​ ಮೈಸೂರು ಚಲೋ ಸಮಾರೋಪ - BJP JDS PADAYATRA CONCLUDED PGM

Last Updated : Aug 12, 2024, 4:22 PM IST

ABOUT THE AUTHOR

...view details