ಶಿರಸಿ (ಉತ್ತರ ಕನ್ನಡ): ಬಿಜೆಪಿಯಲ್ಲಿ ಎಷ್ಟು ಬಣ ಆಗಿದೆ ಎಂದು ಗೊತ್ತಾಗುತ್ತಿಲ್ಲ. ನಾನೂ ಬಣಗಳನ್ನು ಲೆಕ್ಕ ಮಾಡುತಿದ್ದೇನೆ. ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದರು.
ಶಿರಸಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಾರ‍್ಯಾರ ನಿಲುವು ಸರಿ, ಯಾರ‍್ಯಾರ ನಿಲುವು ತಪ್ಪು ಎನ್ನುವುದು ಇನ್ನೂ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ. ನಾನು ಮತ್ತು ಸೋಮಶೇಖರ್ ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ವಿಜಯೇಂದ್ರ ಹಾಗೂ ಯತ್ನಾಳ್ ಸಹ ಹೇಳಿದ್ದರು. ಯಾರ‍್ಯಾರು ನಾವು ತಪ್ಪು ಎಂದು ಹೇಳಿದವರೆಲ್ಲ ಅವರೇ ತಪ್ಪು ಮಾಡುತ್ತಿದ್ದಾರೆ. ಯಾವುದೇ ವಿವಾದಕ್ಕೆ ಬೀಳಬಾರದು ಎಂದು ನಾನು ಸುಮ್ಮನಿದ್ದೇನೆ. ಯಾವಾಗ ವಿವಾದದಲ್ಲಿ ಬೀಳಬೇಕು ಎನಿಸುತ್ತದೆಯೋ ಅಂದು ಬೀಳುತ್ತೇನೆ" ಎಂದು ಅಧ್ಯಕ್ಷ ಸ್ಥಾನದ ಕುರಿತು ಬಿಜೆಪಿ ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಅಸಮಾಧಾನ ಹೊರಹಾಕಿದರು.