ಶಿವಮೊಗ್ಗ:ಅವರು ಯಾರು?, ಅವರೇನು ನಮ್ಮನ್ನೇನು ಕೊಂಡುಕೊಂಡಿದ್ದಾರಾ? ಎಂದು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಕರೆದು ತರುತ್ತೇನೆ ಎಂದಿರುವ ಶಾಸಕ ಸಿ. ಪಿ ಯೋಗೇಶ್ವರ್ ಹೇಳಿಕೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೇನು ಅವರನ್ನು ನಂಬಿಕೊಂಡು ನಮ್ಮ ನಮ್ಮ ಕ್ಷೇತ್ರದಲ್ಲಿ ನಿಂತು ಗೆದ್ದು ಬಂದಿದ್ದೇವಾ? ಎಂದು ಪ್ರಶ್ನಿಸಿದ್ದಾರೆ. ಅವರು ಯಾರು? ಎಲ್ಲರನ್ನು ಕೊಂಡುಕೊಳ್ಳುತ್ತೇವೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಮೊದಲು ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿದರು (ETV Bharat) ನಮಗೆ ಟಾಸ್ಕ್ ಕೊಟ್ಟರೆ ಅವರನ್ನು ಸೆಳೆಯುತ್ತೇವೆ, ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು. ಅವರಿಗೆ ಇದನ್ನೇ ಮಾಡಿ ಅಭ್ಯಾಸ. ಹಾಗಾಗಿ ಅವರು ಇದನ್ನೇ ಹೇಳುತ್ತಿದ್ದಾರೆ. ಎಲ್ಲಿ ಹೋದ ಕಡೆಯಲ್ಲಿ ಅದನ್ನೇ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಗೆದ್ದ ತಕ್ಷಣ ಈ ರೀತಿ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಅಹಂ ಮನುಷ್ಯನಿಗೆ, ಏನು ಮಾಡೋಕೆ ಆಗುತ್ತೆ. ಅಹಂ ಇರುತ್ತಲ್ಲ? ಎಂದಿದ್ದಾರೆ.
ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಯೋಗೇಶ್ವರ್ ಯಾರು?:ಜೆಡಿಎಸ್ ನಡೆಸಲು ನಾಯಕತ್ವವೇ ಇಲ್ಲ, ಮುಂದೊಂದು ದಿನ ಜೆಡಿಎಸ್ ಇರಲ್ಲ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಯೋಗೇಶ್ವರ್ ಯಾರು? ಎಂದರು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಯೋಗೇಶ್ವರ್ ಅವರು ಅವರ ಪಾರ್ಟಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ನಿಂತು ಗೆದ್ದಿರುವವರು. ಅವರು ನಮ್ಮ ಬಗ್ಗೆ ಏನು ಹೇಳ್ತಾರೆ. ಎಲ್ಲರನ್ನೂ ಅವರದ್ದೇ ಲೆಕ್ಕದಲ್ಲಿ ತೆಗೆದುಕೊಂಡು ಹೋದರೆ ರಾಜಕಾರಣದಲ್ಲಿ ಯಾರೂ ಇರುವುದಿಲ್ಲ ಎಂದರು.
ಜೆಡಿಎಸ್ ಪಕ್ಷ ಫಿನಿಕ್ಸ್ ಹಕ್ಕಿ ಇದ್ದಂತೆ :ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಒಂದು ತರ ಫಿನಿಕ್ಸ್ ಹಕ್ಕಿ ಇದ್ದ ಹಾಗೆ, ನಾವು ಮತ್ತೆ ಎದ್ದು ಬರುತ್ತೇವೆ ಎಂಬ ದೃಢವಾದ ನಂಬಿಕೆ ಇದೆ. ರಾಜಕಾರಣದಲ್ಲಿ ಜೆಡಿಎಸ್ ಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭವಿಷ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಶಾಸಕರು ಜೆಡಿಎಸ್ನಲ್ಲೇ ಇರುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಜೆಡಿಎಸ್ನಲ್ಲಿಯೇ ಎಲ್ಲರೂ ಇರುತ್ತಾರೆ ಎನ್ನುವ ಗ್ಯಾರಂಟಿ ಇದೆ. ಒಂದಿಬ್ಬರ ಬಗ್ಗೆ ಕೆಲವೊಂದು ಸರಿ ಹೇಳಲು ಆಗುವುದಿಲ್ಲ. ಓವರ್ ಕಾನ್ಫಿಡೆನ್ಸ್ ಅಲ್ಲ, ಪಕ್ಷದಲ್ಲಿ ಇರುವವರೆಲ್ಲರೂ ಗಟ್ಟಿಯಾಗಿ ಪಕ್ಷದಲ್ಲಿ ಇದ್ದಾರೆ ಎಂದು ಹೇಳಿದರು.
ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ : ಸಚಿವ ಮಧು ಬಂಗಾರಪ್ಪನವರು ಜೆಡಿಎಸ್ ಶಾಸಕರನ್ನು ಸೆಳೆಯುವ ಯತ್ನ ಶಿವಮೊಗ್ಗದಿಂದಲೇ ಯಾಕೆ ಪ್ರಾರಂಭವಾಗಬಾರದು? ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಮಧು ಬಂಗಾರಪ್ಪ ಸಹ ಜೆಡಿಎಸ್ ಪಕ್ಷದಲ್ಲಿ ಇದ್ದು ಹೋದವರು. ಎಲ್ಲರನ್ನ ಎಳೆದುಕೊಂಡು ಹೋಗುತ್ತೇವೆ ಎನ್ನುವುದು ತಪ್ಪು. ಮಧು ಬಂಗಾರಪ್ಪ ಅವರ ಮೇಲೆ ಗೌರವವಿದೆ. ಪಕ್ಷಾನೆ ಬೇರೆ, ವಿಶ್ವಾಸನೇ ಬೇರೆ. ಪಕ್ಷ ಅಂತ ಬಂದಾಗ ನಮ್ಮ ಪಕ್ಷ ನಮಗೆ, ಅವರ ಪಕ್ಷ ಅವರಿಗೆ ಎಂದರು.
ಇದನ್ನೂ ಓದಿ :ಅಧಿಕಾರ ಎಲ್ಲಿ ಸಿಗುತ್ತೋ ಅಲ್ಲಿಗೆ ಸಿ.ಪಿ.ಯೋಗೇಶ್ವರ್ ಜಂಪ್ ಆಗ್ತಾರೆ: ನಿಖಿಲ್ ಕುಮಾರಸ್ವಾಮಿ