ಶಾಸಕ ರಮೇಶ್ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು. ಚಿಕ್ಕೋಡಿ (ಬೆಳಗಾವಿ):ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಡಿ ಕೆ ಶಿವಕುಮಾರ್ ನನ್ನ ವಿರುದ್ಧ 420 ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಡಿ ಕೆ ಶಿವಕುಮಾರ್ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ರಾಜು ಕಾಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಕಾಗವಾಡ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
''ಹಿಂದೆ ಸಿ ಡಿ ಕೇಸ್ನಲ್ಲಿ ನನಗೆ ಶಿಕ್ಷೆ ನೀಡಬೇಕೆಂದು ಕಾಂಗ್ರೆಸ್ನವರು ಪ್ರಯತ್ನಪಟ್ಟಿದ್ದರು. ಆದ್ರೆ ಆಗ್ಲಿಲ್ಲ. ಈಗ ತಮ್ಮ ಸರ್ಕಾರದ ಅವಧಿಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣಗಳು ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಿಂದ ನಾನು ಹಿಂದೆ ಸರಿಯುವುದಿಲ್ಲ. ನಾನು ಗಟ್ಟಿಯಾಗಿ ಇದ್ದೇನೆ, ಇದನ್ನು ಎದುರಿಸುತ್ತೇನೆ. ಈ ಕುರಿತು ನಮ್ಮ ವಕೀಲರು ಹೆಚ್ಚಿಗೆ ಮಾತನಾಡಬೇಡಿ ಅಂದಿದ್ದಾರೆ. ಅದ್ದರಿಂದ ಏನು ಮಾಹಿತಿ ನೀಡುವುದಿಲ್ಲ'' ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಅಪೆಕ್ಸ್ ಬ್ಯಾಂಕ್ ನಿಂದ ವಂಚನೆ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಕರಣ ದಾಖಲು ಮಾಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ನನಗೆ ಸಿಡಿ ಪ್ರಕರಣದಲ್ಲಿ ಶಿಕ್ಷೆ ಕೊಡಿಸಲು ಮುಂದಾಗಿದ್ದ, ಆದರೆ ಆಗ್ಲಿಲ್ಲ. ಅದರಲ್ಲಿ ಅವನು ವಿಫಲನಾಗಿದ್ದಾನೆ ಎಂದು ಏಕವಚನದಲ್ಲೇ ಹರಿಹಾಯ್ದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕೇಂದ್ರ ಸರ್ಕಾರ ರಜೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ರಾಜ್ಯ ಸರ್ಕಾರ ಇವತ್ತು ರಜೆ ಘೋಷಣೆ ಮಾಡುತ್ತದೆ ಎಂದು ನಿರೀಕ್ಷೆಯಲ್ಲಿ ಇದ್ದೇನೆ. ಕಾದು ನೋಡೋಣ ಎಂದು ಅಭಿಪ್ರಾಯ ತಿಳಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇಮಕಾತಿ :ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ನೇಮಕಾತಿ ವಿಚಾರ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬೇರೆಯವರು ಆಯ್ಕೆಯಾಗುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಯಾವುದೇ ಬದಲಾವಣೆ ಆಗುವುದಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬೇರೆಯವರು ಯಾರೂ ಆಗುವುದಿಲ್ಲ, ರಮೇಶ ಕತ್ತಿ ಮುಂದುವರಿಯುತ್ತಾರೆ. ಯಾವುದೇ ಬದಲಾವಣೆ ಇಲ್ಲ, ಎಲ್ಲವೂ ಸುಳ್ಳು ಎಂದು ಹೇಳಿದರು.
ರಾಮಲಲ್ಲಾ ಪ್ರತಿಷ್ಠಾಪನೆ ವಿಚಾರ: ಶ್ರೀರಾಮ ಎಲ್ಲರಿಗೂ ದೇವರು, ಬಿಜೆಪಿಗೆ ಅಷ್ಟೇ ಅಲ್ಲ, ಕಾಂಗ್ರೆಸ್ನವರಿಗೂ ದೇವರು. ಆದರೆ ಕಾಂಗ್ರೆಸ್ನವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಅನ್ನೋದು ತಿಳಿಯುತ್ತಿಲ್ಲ. ಮುಸ್ಲಿಂ ಸಮುದಾಯದ ಮತ ವೋಲೈಕೆಗಾಗಿ ಕಾಂಗ್ರೆಸ್ನವರು ಈ ರೀತಿ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನವರು ಯಾರೂ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಹೋಗುತ್ತಿಲ್ಲ. ಕಾಂಗ್ರೆಸ್ನವರ ಈ ತೀರ್ಮಾನ ದುಃಖಕರ ಎಂದು ಟೀಕಿಸಿದರು.
ಶಾಸಕ ಲಕ್ಷ್ಮಣ್ ಸವದಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ರಾಮ ಮಂದಿರ ನಿರ್ಮಾಣಕ್ಕೆ ನಾನು ಒಂದು ಕೋಟಿ ರೂಪಾಯಿ ನೀಡಿದ್ದೇನೆ. ಇಲ್ಲಿ ಕೊಟ್ಟಿದ್ದನ್ನು ಹೇಳಬಾರದು, ಅನಿವಾರ್ಯವಾಗಿ ನಿಮ್ಮ ಈ ವಿಷಯವನ್ನು ಹೇಳುತ್ತಿದ್ದೇನೆ ಎಂದು ಲಕ್ಷ್ಮಣ್ ಸವದಿಗೆ ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಫ್ರೀ ಹ್ಯಾಂಡ್ನಿಂದ ಕೆಲಸ ಮಾಡಲು ಅಲ್ಲಿಯವರು ಬಿಡುತ್ತಿಲ್ಲ. ಅವರ ವಿರುದ್ಧ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ತಂದು ಸಿಎಂ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
ಇದನ್ನೂಓದಿ:ಒಕ್ಕಲಿಗರಿಗೆ ಮೀಸಲಾತಿ ಕಡಿಮೆ ಮಾಡಿ ಮುಸ್ಲಿಮರಿಗೆ ಕೊಟ್ಟಿದ್ದು ನಾನು: ಹೆಚ್ ಡಿ ದೇವೇಗೌಡ