ಚಿಕ್ಕಮಗಳೂರು:ಸಮಾಜ ಕಲ್ಯಾಣ ಇಲಾಖೆಯ ಎಫ್ಡಿಎ ನೌಕರನ ಬಳಿ ಶಾಸಕರೊಬ್ಬರ ಲೆಟರ್ ಪ್ಯಾಡ್, ಬುಕ್‍ಲೆಟ್, ಸೀಲ್-ಸಹಿಗಳು ಸಿಕ್ಕಿರುವ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಎಂಬುವರ ಬಳಿ ಶಾಸಕರೊಬ್ಬರ ಲೆಟರ್ ಪ್ಯಾಡ್, ಬುಕ್‍ಲೆಟ್, ಸೀಲ್-ಸಹಿಗಳು ಪತ್ತೆಯಾಗಿದ್ದು, ಅವುಗಳನ್ನು ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಗೋಪಾಲಕೃಷ್ಣ ಮಾತನಾಡಿ, "ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಎಂಬುವರು ಶಾಸಕರೊಬ್ಬರ ಮತ್ತು ಹಿರಿಯ ಅಧಿಕಾರಿಗಳ ಸೀಲ್ ಇಟ್ಟುಕೊಂಡು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಕೊಟ್ಟು, ಕಚೇರಿಯ ತಪಾಸಣೆಯನ್ನು ಮಾಡಿದ್ದಾರೆ. ತಪಾಸಣೆಯಲ್ಲಿ ಯಾವುದೇ ರೀತಿಯ ಸೀಲ್ಗಳು ಪತ್ತೆಯಾಗಿಲ್ಲ. ಆರೋಪ ಸಂಬಂಧ ಫೋಟೋಗಳನ್ನು ಇಲಾಖೆಯ ಮುಖ್ಯಸ್ಥರಿಗೆ ನೀಡಿದ್ದಾರೆ. ಈ ಕುರಿತು ಅವರು ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ" ಎಂದರು.