ಕರ್ನಾಟಕ

karnataka

ETV Bharat / state

ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಸೇರಿದ್ದು ನನಗೆ ಬೇಸರ ಮೂಡಿಸಿದೆ: ಶಾಸಕ ಲಕ್ಷ್ಮಣ್ ಸವದಿ - ರಾಮ ಮಂದಿರ ಉದ್ಘಾಟನೆ

ರಾಮ ಯಾವುದೇ ಪಕ್ಷದ, ವ್ಯಕ್ತಿಯ ಸ್ವತ್ತಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಶಾಸಕ ಲಕ್ಷ್ಮಣ್ ಸವದಿ
ಶಾಸಕ ಲಕ್ಷ್ಮಣ್ ಸವದಿ

By ETV Bharat Karnataka Team

Published : Jan 23, 2024, 5:21 PM IST

ಶಾಸಕ ಲಕ್ಷ್ಮಣ್ ಸವದಿ

ಚಿಕ್ಕೋಡಿ : ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಸೇರಬಾರದು. ರಾಮ ಮಂದಿರ ಉದ್ಘಾಟನೆ ವೇಳೆ ಧರ್ಮದಲ್ಲಿ ರಾಜಕಾರಣ ಎದ್ದು ಕಾಣುತ್ತಿದೆ. ರಾಮ ಯಾವುದೇ ಪಕ್ಷದ, ವ್ಯಕ್ತಿಯ ಸ್ವತ್ತಲ್ಲ. ಒಬ್ಬ ಆದರ್ಶ ಪುರುಷ ರಾಮನನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಮಂಜಸವಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕಾರಣ ಬೆರೆಸಿ ಅದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನ ನಡೆದಿದೆ. ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಸೇರಿದ್ದು ನನಗೆ ಬೇಸರ ಮೂಡಿಸಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ರಾಜಕಾರಣ ಬಳಸುವುದನ್ನು ಹೊರತು ಪಡಿಸಿ, ಎಲ್ಲರ ಮನಸ್ಸಿಗೆ ಒಪ್ಪುವ ಕಾರ್ಯಕ್ರಮ ಆಗಬೇಕು. ಇದು ಒಂದು ಕೋಮಿಗೆ ಒಂದು ಪಕ್ಷಕ್ಕೆ ಸೀಮಿತವಾಗಿ ನಡೆಯುತ್ತಿರುವುದು ನನಗೆ ಎಲ್ಲೋ ಒಂದು ಕಡೆ ಬೇಸರ ಅನ್ನಿಸುತ್ತದೆ. ರಾಮನ ಭಕ್ತರು ಎಲ್ಲ ಪಕ್ಷದಲ್ಲಿ ಇದ್ದಾರೆ. ಒಂದೇ ಪಕ್ಷದಲ್ಲಿ ಇಲ್ಲ. ಇಡೀ ದೇಶದಲ್ಲಿ ಎಷ್ಟು ರಾಜಕೀಯ ಪಕ್ಷಗಳು ಇವೆ, ಅಲ್ಲೆಲ್ಲ ರಾಮನ ಭಕ್ತರಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ನನಗೆ ವೈಯಕ್ತಿಕವಾಗಿ ಬೇಸರ ಮೂಡಿಸಿದೆ ಎಂದು ಹೇಳಿದರು.

ಆರ್​ಎಸ್​ಎಸ್ ಮುಖಂಡರಿಗೆ ಟಾಂಗ್ ನೀಡಿದ ಸವದಿ :ನಾನು ರಾಮ ಮಂದಿರ ಉದ್ಘಾಟನೆಗೆ ಹತ್ತು ಲಕ್ಷ ರೂಪಾಯಿ ನೀಡಿದ್ದೇನೆ. ನನಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ. ಬಿಜೆಪಿಯವರು ಗೆಲ್ಲುವವರೆಗೆ ಹಿಂದೂ ಹಿಂದೂ ಅನ್ನುತ್ತಾರೆ. ನಂತರ ಅವರು ಮುಂದು ಇವರು ಹಿಂದು ಎಂದು ಸ್ಥಳೀಯ ಆರ್​ಎಸ್​ಎಸ್ ಹಿರಿಯ ಮುಖಂಡ ಅರವಿಂದ್ ರಾವ್ ದೇಶಪಾಂಡೆಗೆ ತಿರುಗೇಟು ನೀಡಿದರು.

ಅರವಿಂದ್ ರಾವ್ ದೇಶಪಾಂಡೆ ಹೇಳಿದ್ದೇನು?: 'ಲಕ್ಷ್ಮಣ್ ಸವದಿ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕೋಟಿಗಟ್ಟಲೆ ದೇಣಿಗೆ ಕೊಟ್ಟವರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ. ಅಲ್ಲಿ ಏಳು ಸಾವಿರ ಗಣ್ಯಾತಿಗಣ್ಯರು ಮತ್ತು ಆಯಾ ಸಮುದಾಯದ ಶ್ರೀಗಳಿಗೆ ಆಹ್ವಾನ ನೀಡಲಾಗಿದೆ. ಎಲ್ಲರಿಗೂ ಒಮ್ಮೆಲೆ ಆಹ್ವಾನ ನೀಡಿ, ಇಲ್ಲಿ ಏನಾದರೂ ಅಸ್ತವ್ಯಸ್ತವಾದರೆ ಮತ್ತೆ ಲಕ್ಷ್ಮಣ್ ಸವದಿ ನಮಗೆ ಒಂದು ಅಲ್ಲಿ ಒಳ್ಳೆ ಊಟವೂ ಸಿಗಲಿಲ್ಲ ಎಂದು ಮತ್ತೆ ಅಪಸ್ವರ ಎತ್ತುತ್ತಾರೆ. ಈ ದೃಷ್ಟಿಯಿಂದ ನಮಗೂ ಮತ್ತು ಯಡಿಯೂರಪ್ಪ ಅವರಿಗೂ ಆಹ್ವಾನ ಬಂದಿಲ್ಲ. ಸವದಿ ಮತ್ತು ಸಿದ್ದರಾಮಯ್ಯ ಅವರು ರಾಜಕೀಯವಾಗಿ ಮಾತನಾಡುತ್ತಾರೆ. ಅಷ್ಟೊಂದು ಪ್ರಾಮುಖ್ಯತೆ ಕೊಡುವುದು ಸರಿಯಲ್ಲ' ಎಂದು ಅರವಿಂದ್ ರಾವ್ ದೇಶಪಾಂಡೆ ಹೇಳಿಕೆ ನೀಡಿದ್ದರು.

ನನಗೆ ಏನೂ ಬೇಸರ ಇಲ್ಲ :ಇದಕ್ಕೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿ, ಅಲ್ಪಮತಿಗಳು ಹೊಳೆದಷ್ಟು ಮಾತನಾಡುತ್ತಾರೆ. ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತು ಕೊಡುವುದಕ್ಕೆ ಹೋಗುವುದಿಲ್ಲ. ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ, ನಾನು ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ ಎಂದು ಹೇಳಿದ್ದೆ. ಆದರೆ, ಇಲ್ಲಿ ಯಾರೂ ಸ್ಥಳೀಯರು ಕೋಟಿ ಕೋಟಿ ರೂಪಾಯಿ ದೇಣಿಗೆ ಕೊಟ್ಟವರನ್ನು ಕರೆದಿಲ್ಲ. ಹತ್ತು ಲಕ್ಷ ರೂಪಾಯಿ ಏನು ದೊಡ್ಡ ವಿಷಯ ಏನು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅದರ ಬಗ್ಗೆ ನನಗೆ ಏನೂ ಬೇಸರ ಇಲ್ಲ ಎಂದರು.

ನಮ್ಮ ತಂದೆ ತಾಯಿ ನನಗೆ ಲಕ್ಷ್ಮಣ್ ಎಂದು ನಾಮಕರಣ ಮಾಡಿದ್ದಾರೆ. ಹೀಗೆ ಹೇಳುವವರು ಮಂದಿರ ನಿರ್ಮಾಣಕ್ಕೆ ಎಷ್ಟು ಕೊಟ್ಟಿದ್ದಾರೆ ಬಿಟ್ಟಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಅವರವರ ಭಕ್ತಿಗೆ ಅನುಸಾರವಾಗಿ ಹಣ ನೀಡುತ್ತಾರೆ. ಯಾರು ಬೇಕಾದರೂ ಕೊಡಬಹುದು, ಇಲ್ಲದೆಯೂ ಇರಬಹುದು. ಯಾರು ಇವರು ಎಂದು ಒತ್ತು ಕೊಟ್ಟು ಮಾತನಾಡುತ್ತಾರೊ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಇವರು ಹಣ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಡುವರು ಅಷ್ಟೇ. ಮುಂದೊಂದು ದಿನ ಸಮಯ ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಶ್ರೀರಾಮನ ವಿರುದ್ಧವೆಂಬ ಅಪಪ್ರಚಾರವನ್ನು ಖಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details