ಗಂಗಾವತಿ:ಆನೆಗೊಂದಿಉತ್ಸವವನ್ನು ಮಾರ್ಚ್ 11 ಮತ್ತು 12 ರಂದು ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ವಿಜಯನಗರದ ಮೊದಲ ರಾಜಧಾನಿಯಾದ ಐತಿಹಾಸಿಕ ಪ್ರಾಮುಖ್ಯದ ಆನೆಗೊಂದಿಯಲ್ಲಿ ಈ ಬಾರಿ ಉತ್ಸವ ಮತ್ತಷ್ಟು ಕಳೆಗಟ್ಟಲಿದೆ ಎಂದು ಶಾಸಕ ಜಿ. ಜನಾರ್ದರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿ ಸೂಚಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೆರವು ನೀಡುವ ಭರವಸೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉತ್ಸವಕ್ಕೆ ಸುಮಾರು 2 ರಿಂದ 3 ಕೋಟಿ ರೂಪಾಯಿ ಅನುದಾನ ಸಿಗಲಿದ್ದು, ಅದ್ಧೂರಿಯಾಗಿ ಉತ್ಸವ ಆಚರಣೆ ಮಾಡುವ ಸಂಬಂಧ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು.
ಉತ್ಸವದ ಉದ್ಘಾಟನೆ, ಸಮಾರೋಪಕ್ಕೆ ಯಾರನ್ನು ಕರೆಯಬೇಕು. ವೇದಿಕೆ ಕಾರ್ಯಕ್ರಮಕ್ಕೆ ಯಾವೆಲ್ಲಾ ಕಲಾವಿದರನ್ನು ಕರೆಯಿಸಬೇಕು ಎಂಬುವುದರ ಬಗ್ಗೆ ಶೀಘ್ರವೇ ಪಟ್ಟಿ ತಯಾರಿಸಲಾಗುವುದು. ಆನೆಗೊಂದಿ ಉತ್ಸವಕ್ಕೆ ಲೋಕಸಭಾ ಚುನಾವಣೆಯ ಅಧಿಸೂಚನೆ ಅಥವಾ ನೀತಿ ಸಂಹಿತೆ ಪರಿಣಾಮ ಬೀರದು ಎಂದರು.
ಕಿಷ್ಕಿಂಧಾ ಜಿಲ್ಲೆಯ ಪ್ರಸ್ತಾಪ:ಕಿಷ್ಕಿಂಧಾ ಜಿಲ್ಲೆ ರಚನೆಯ ಬಗ್ಗೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸಂದರ್ಭದಲ್ಲಿಯೇ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಪ್ರಸ್ತಾಪ ಮಾಡುವ ಉದ್ದೇಶವಿತ್ತು. ಆದರೆ, ತಾಂತ್ರಿಕ ಕಾರಣಕ್ಕೆ ಸಾಧ್ಯವಾಗಿಲ್ಲ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಖಚಿತವಾಗಿ ಪ್ರಸ್ತಾಪಿಸುತ್ತೇನೆ. ರಾಜ್ಯದಲ್ಲಿ ಕಿಷ್ಕಿಂಧಾ, ಚಿಕ್ಕೋಡಿ, ಮಧುಗಿರಿ ಸೇರಿದಂತೆ ಇನ್ನು ಮೂರು-ನಾಲ್ಕು ಹೊಸ ಜಿಲ್ಲೆಗಳ ರಚನೆಯ ಬಗ್ಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.