ಶಿವಮೊಗ್ಗ:ನಾನು ಪಕ್ಷದಲ್ಲಿ ಏನನ್ನು ಕೇಳಿಲ್ಲ, ನಾನು ಸ್ವತಂತ್ರವಾದ ಹಕ್ಕಿ ಇದ್ದಂತೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಪಕ್ಷದಲ್ಲಿ ಯಾವ ಸ್ಥಾನವನ್ನು ಕೇಳಿಲ್ಲ. ನಾನು ಈಗ ಸ್ವತಂತ್ರ ಹಕ್ಕಿ. ಮೈಸೂರಿನಲ್ಲಿ ಹಳ್ಳಿ ಹಕ್ಕಿ, ನಾನು ಸ್ವತಂತ್ರ ಹಕ್ಕಿ. ದೆಹಲಿಯಲ್ಲಿ ರಾಜ್ಯದ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. 2024 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಭಾರತ ಭಾರತವಾಗಿ ಉಳಿಯಬೇಕಿದೆ ಎಂದು ತಿಳಿಸಿದರು.
ದೇಶ ವಿಭಜನೆ ಎನ್ನುವುದು ಕಾಂಗ್ರೆಸ್ ಜೀನ್ಸ್ನಲ್ಲೇ ಇದೆ:''ಕಾಂಗ್ರೆಸ್ನವರಿಂದ ಮಾತ್ರ ಇಂಥ ದೇಶದ್ರೋಹದ ಹೇಳಿಕೆ ಬರುವುದು. ನೆಹರು ಅವರನ್ನು ಪ್ರಧಾನಿಯಾಗಿಸಲು ಅಂದು ದೇಶವನ್ನು ಒಡೆದು ಹಾಕಿದರು. ಕಾಶ್ಮೀರಕ್ಕೆ ಆರ್ಟಿಕಲ್ 370 ಕಾಯ್ದೆ ಜಾರಿಗೆ ತಂದರು. ಕಾಂಗ್ರೆಸ್ ಜೀನ್ಸ್ನಲ್ಲಿಯೇ ಮೊದಲಿನಿಂದ ಒಡೆದಾಳುವ ನೀತಿ ಇದೆ. ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಹೇಳಿದ್ರೆ, ಇಲ್ಲಿ ತೋಡೋ ಎಂದು ಹೇಳುತ್ತಿದ್ದಾರೆ. ಸಂಸದ ಡಿ ಕೆ ಸುರೇಶ್ ಪ್ರತಿಜ್ಞೆ ತೆಗೆದುಕೊಂಡು ಹೀಗೆ ಮಾತನಾಡಬಾರದು'' ಎಂದು ಯತ್ನಾಳ್ ಹರಿಹಾಯ್ದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ''ರಾಹುಲ್ ಗಾಂಧಿಗೆ ಏನೂ ಗೂತ್ತಿಲ್ಲ. ಅವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂದು ಗೂತ್ತಿಲ್ಲ. ದೇಶ ಒಡೆಯುವ ಹೇಳಿಕೆ ನೀಡಿದ್ದ ಸಂಸದ ಡಿ ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಒಂದು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಅವರು ಡಿ ಕೆ ಸುರೇಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಂತೆ ಆಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಮುಳುಗುವ ಹಡಗಿಗೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದರು. ಮುಂದೆ ಅಧಿಕಾರಕ್ಕೆ ಬರೋದಿಲ್ಲ ಎಂದು ಖರ್ಗೆ ಅವರು ಹೇಳುತ್ತಿದ್ದಾರೆ. ಅವರು ಮೋದಿ ಲಕ್ಕಿ ಮ್ಯಾನ್ ಎಂದು ಹೇಳಿದ್ದಾರೆ. ಕುಟುಂಬ ರಾಜಕೀಯದಿಂದ ಕಾಂಗ್ರೆಸ್ ಮುಳುಗಿ ಹೋಗಿದೆ. ಅದೇ ರೀತಿ ಪಕ್ಷವು ಸಹ ಮುಳುಗಿ ಹೋಗಿದೆ ಎಂದು ಯತ್ನಾಳ್ ಟೀಕಿಸಿದರು.
ರಾಜ್ಯ ಸರ್ಕಾರವು ಕೇಂದ್ರದಂತೆ ಶ್ವೇತ ಪತ್ರ ಹೊರಡಿಸಲಿ:ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಿದಂತೆ ರಾಜ್ಯ ಸರ್ಕಾರವು ಸಹ ಶ್ವೇತ ಪತ್ರ ಹೊರಡಿಸಬೇಕಿದೆ. ಧಾರ್ಮಿಕ ದತ್ತಿ ಇಲಾಖೆ ಆಧೀನದ ಹಿಂದೂ ದೇವಾಲಯಗಳಿಂದ ಹಣ ಪಡೆಯುತ್ತಿದೆ. ಅಲ್ಪಸಂಖ್ಯಾತರಿಗೆ ನೀಡಲು ಹಣ ಇದೆ. ಆದರೆ ರೈತರಿಗೆ ಹಣ ನೀಡಲು ಇವರ ಬಳಿ ಹಣ ಇಲ್ಲ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದು ನಮ್ಮ ಗುರಿ ಆಗಿದೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಮಾದಾರ ಚೆನ್ನಯ್ಯ ಸ್ವಾಮೀಜಿ ಚುನಾವಣೆ ನಿಲ್ಲುವ ಕುರಿತ ಪ್ರಶ್ನೆಗೆ ಸ್ವಾಮೀಜಿಗಳು ಚುನಾವಣೆ ಸ್ಪರ್ಧೆ ಮಾಡಬಹುದು. ಈಗ ಯೋಗಿ ಆದಿತ್ಯನಾಥ್ ರಂತೆ ಸ್ಪರ್ಧಿಸಬಹುದು ಎಂದರು.
ಮೈತ್ರಿಯಿಂದ ಜೆಡಿಎಸ್ನಲ್ಲಿ ಸಂತಸ:ಜೆಡಿಎಸ್ನವರು ಮೈತ್ರಿಯಿಂದಾಗಿ ಸಂತಸಗೊಂಡಿದ್ದಾರೆ. ಅವರಿಗೆ ಎಷ್ಟು ಸೀಟು ಬಿಟ್ಟುಕೊಡಬೇಕೆಂದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಈ ಕುರಿತು ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಯತ್ನಾಳ್ ಹೇಳಿದರು.