ಬಜೆಟ್ಗ: ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ಬೆಳಗಾವಿ: ಅಥಣಿ-ಕೊಟ್ಟಲಗಿ-ಅಮ್ಮಾಜೇಶ್ವರಿ, ಶ್ರೀ ಚನ್ನವೃಷಭೇಂದ್ರ, ಮಹಾಲಕ್ಷ್ಮಿ, ಸತ್ತಿಗೇರಿ, ಮಾರ್ಕಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ಹಳೆಯ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಬೆಳಗಾವಿ ನಗರ ಪರಿಮಿತಿಯಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿವಾರಿಸಲು 450 ಕೋಟಿ ರೂ. ವೆಚ್ಚದಲ್ಲಿ 4.50 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಾಡಲಾಗುವುದು. ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು. ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಮೈಲಿಗಲ್ಲು:ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಈ ವರ್ಷ ಶತಮಾನದ ಮೈಲಿಗಲ್ಲು ಪೂರ್ಣಗೊಳಿಸುತ್ತಿದೆ. ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿದೆ. ಈ ಅಧಿವೇಶನದ ಕೊಡುಗೆಯನ್ನು ಸ್ಮರಿಸಲು 2 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೇ ಗಾಂಧಿ ಕರ್ನಾಟಕದಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಸ್ಮರಣಾರ್ಥ ಫಲಕಗಳನ್ನು ಅಳವಡಿಸುವ ಬಗ್ಗೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಜೆಟ್ ಬಗ್ಗೆ ಯಾರು ಏನಂದ್ರು?:ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, "ಮಹದಾಯಿ ಬಗ್ಗೆ ಸ್ಪಷ್ಟತೆ ಇಲ್ಲ. ಹಿಂದೆ ರಮೇಶ ಜಾರಕಿಹೊಳಿ ನೀರಾವರಿ ಮಂತ್ರಿ ಆಗಿದ್ದಾಗ ತಂದಿದ್ದ 11 ಏತ ನೀರಾವರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪವಿಲ್ಲ. ಲಕ್ಷ್ಮಣ ಸವದಿ ಅವರ ಒತ್ತಡದಿಂದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅನುದಾನ ನೀಡುತ್ತೇವೆ ಎಂದಿದ್ದಾರೆ. ಆದರೆ ಗೋಕಾಕ, ರಾಮದುರ್ಗ ತಾಲೂಕಿನ ನೀರಾವರಿ ಯೋಜನೆಗಳಿಗೆ ಅನುದಾನ ಘೋಷಿಸಿಲ್ಲ. ಬರಗಾಲ ಸ್ಥಿತಿ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಇಲ್ಲ. ಗ್ಯಾರಂಟಿ ಯೋಜನೆಗಳ ಹಣ ಹೊಂದಿಸುವ ಭರದಲ್ಲಿ ಉಳಿದ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ" ಎಂದರು.
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ: ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಆಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ, ತೀವ್ರ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ವಿಭಜನೆ ಜೇನುಗೂಡಿಗೆ ಕೈ ಹಾಕಿಲ್ಲ. ಈ ಬಗ್ಗೆ ಮಾತನಾಡಿದ ಅಶೋಕ ಚಂದರಗಿ, "ಜಿಲ್ಲಾ ವಿಭಜನೆ ಬಜೆಟ್‌ನಲ್ಲಿ ಘೋಷಿಸುವಂಥದ್ದಲ್ಲ. ಚಿಕ್ಕೋಡಿ, ಅಥಣಿ, ಬೈಲಹೊಂಗಲ, ಗೋಕಾಕ್ ಜಿಲ್ಲೆಗೆ ಅಲ್ಲಿನ ಜನ ಆಗ್ರಹಿಸುತ್ತಿದ್ದಾರೆ. ಇದು ಬಹಳ ದೊಡ್ಡ ರಾಜಕೀಯ ವಿಷಯ. ಏಕಾಏಕಿ ವಿಭಜನೆ ಮಾಡಲು ಬರುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿ, ರಿವಾಜುಗಳಿವೆ. ಹಾಗಾಗಿ ಒಂದು ವಾರದಿಂದ ಕೇಳಿ ಬಂದ ಊಹಾಪೋಹಕ್ಕೆ ಇಂದು ತೆರೆ ಬಿದ್ದಿದೆ" ಎಂದು ಹೇಳಿದರು.
ಬಡ, ಮಧ್ಯಮ ವರ್ಗದ ಬಜೆಟ್:ನ್ಯಾಯವಾದಿ ಎನ್.ಆರ್.ಲಾತೂರ್ ಮಾತನಾಡಿ, "ರೈತರು ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿಗೆ ಕೆಲವೊಂದು ಯೋಜನೆಗಳು ಬಜೆಟ್‌ನಲ್ಲಿ ಘೋಷಣೆ ಆಗಿವೆ. ಬೀಜಗಳ ಬ್ಯಾಂಕ್, ಕೆರೆ-ಸರೋವರ ನಿರ್ಮಾಣ, ಕೋಳಿ, ಮೇಕೆ, ಮೀನು ಸಾಕಣೆಗೆ ಉತ್ತೇಜನ ಸಿಕ್ಕಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಸೇರಿ ಸಾಕಷ್ಟು ಒಳ್ಳೆಯ ಅಂಶಗಳನ್ನು ಹೊಂದಿದೆ. ಹಾಗಾಗಿ ಇದು ಬಡ ಮತ್ತು ಮಧ್ಯಮ ವರ್ಗ ಹಾಗೂ ಕಾರ್ಮಿಕರ ಪರ ಬಜೆಟ್" ಎಂದರು.
ನೀರಾವರಿ ಯೋಜನೆಗಳಿಗೆ ಆದ್ಯತೆ ಇಲ್ಲ:ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ ಮಾತನಾಡಿ, "ಬರಗಾಲದ ಸಂಕಷ್ಟದಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಟ್ಟಿಲ್ಲ. ಮಹದಾಯಿ-ಕಳಸಾ ಬಂಡೂರಿ ನಿರ್ಲಕ್ಷಿಸಲಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಬೇಡಿಕೆ ನಿರ್ಲಕ್ಷ್ಯ:ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, "ರೈತರ ಬೇಡಿಕೆಗಳನ್ನು ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರೈತರ ಸಾಲಮನ್ನಾ ಘೋಷಣೆ ಮಾಡಿಲ್ಲ. ರೈತರನ್ನು ಸಾಲ ಮುಕ್ತ ಮಾಡುವುದು ಇವರ ಉದ್ದೇಶ ಅಲ್ಲ. ರೈತರು ಸಾಲದಲ್ಲೇ ಸಾಯಬೇಕು ಎನ್ನುವ ಮನಸ್ಥಿತಿ ಹೊಂದಿದೆ" ಎಂದರು.
ಇದನ್ನೂಓದಿ:ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ; ಸಾಲ ಮನ್ನಾ, ರೈತರ ಮದುವೆಯಾಗುವ ಹೆಣ್ಣಿಗೆ ಪ್ರೋತ್ಸಾಹ ಧನ ನೀಡಲು ಮನವಿ