ಬೆಳಗಾವಿ: ಅಪ್ರಾಪ್ತ ಗರ್ಭಿಣಿ ಯುವತಿಯನ್ನು ಗಂಡನ ಮನೆಯವರೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕೇಳಿ ಬಂದಿದೆ.
ಹೀನಾ ಸಾಹೀಲ್ ಬಾಗವಾನ್ (17) ಮೃತರು. ಬೆಳಗಾವಿ ಕ್ಯಾಂಪ್ ಪ್ರದೇಶದ ನಿವಾಸಿಯಾಗಿದ್ದ ಹೀನಾ ಅವರನ್ನು ಹತ್ತು ತಿಂಗಳ ಹಿಂದೆ ಸಾಹೀಲ್ ಕುತುಬುದ್ದೀನ್ ಬಾಗವಾನ್ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಹೀನಾ ಅವರನ್ನು ಶನಿವಾರ ಪತಿ ಸಾಹೀಲ್ ಮತ್ತು ಆತನ ಮನೆಯವರು ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪತಿ ಸಾಹೀಲ್ ಸೇರಿ ಏಳು ಜನರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹೀನಾ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ತಹಶೀಲ್ದಾರ್ ಸಿದ್ದರಾಯ ಬೋಸಗಿ ಹಾಗೂ ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೀನಾ ಅಪ್ರಾಪ್ತ ಯುವತಿ ಆಗಿರುವ ಹಿನ್ನೆಲೆಯೂ ಫೋಕ್ಸೋ ಕಾಯ್ದೆಯ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತೆಗೆದುಕೊಂಡು ಬರಲಾಗಿತ್ತು.
ಮಾಧ್ಯಮಗಳ ಮುಂದೆ ಮೃತ ಯುವತಿ ತಂದೆ - ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ, ಮಾಧ್ಯಮಗಳ ಜೊತೆಗೆ ಮಾತನಾಡಿದ ಮೃತರ ತಾಯಿ ಸುಮಯಾ ಅಬ್ಬಾಸ ಡೋಣಿ, ಘಟನೆ ನಡೆದ ಬಳಿಕವೂ ನಮಗೆ ಅವರು ತಿಳಿಸಿರಲಿಲ್ಲ. ನಾವೇ ಫೋನ್ ಹಚ್ಚಿ ಕೇಳಿದಾಗ ಬಿಪಿ ಲೋ ಆಗಿದೆ ಅಂತಾ ಹೇಳಿದರು. ಕತ್ತು ಹಿಸುಕಿ ನಮ್ಮ ಮಗಳು ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಅವರು ಕೊಂದಿದ್ದಾರೆ. ನಮಗೆ ಬೇರೆನೂ ಬೇಡ, ನಮ್ಮ ಎರಡೂ ಜೀವಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಮೃತಳ ಅಜ್ಜಿ ಭಾರತಿ ದುಪಾಟಿ ಮಾತನಾಡಿ, ವರದಕ್ಷಿಣೆಗಾಗಿ ಪ್ರತಿದಿನ ನಮ್ಮ ಹುಡುಗಿಗೆ ಕಿರುಕುಳ ನೀಡುತ್ತಿದ್ದರಂತೆ. ಆದರೆ, ಆಕೆ ನಮ್ಮ ಮುಂದೆ ಏನೂ ಹೇಳಿರಲಿಲ್ಲ. ಈಗ ನೋಡಿದರೆ ಗಂಡ, ಅತ್ತೆ, ಮೈದುನ, ಮಾವ ಕೂಡಿಕೊಂಡು ಕೊಲೆ ಮಾಡಿದ್ದಾರೆ. ಇವರಿಗೆಲ್ಲ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಘಟನೆ ಸಂಬಂಧ ದೂರವಾಣಿ ಮೂಲಕ ಡಿಸಿಪಿ ರೋಹಣ ಜಗದೀಶ್ ಅವರನ್ನು ಸಂಪರ್ಕಿಸಿದಾಗ, ಮೇಲ್ನೋಟಕ್ಕೆ ಇದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಈ ಸಂಬಂಧ ಕೊಲೆ, ಬಾಲ್ಯವಿವಾಹ ಮತ್ತು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈಗಾಗಲೇ ಮೃತ ಯುವತಿ ತಂದೆ - ತಾಯಿ, ಪತಿ, ಅತ್ತೆ-ಮಾವ ಸೇರಿದಂತೆ 7 ಜನರನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆ ಶವವಾಗಿ ಪತ್ತೆ: ಪತಿಯಿಂದಲೇ ಕೊಲೆ ಶಂಕೆ