ಆನೇಕಲ್: ಮೂರು ದಿನದಿಂದೀಚೆಗೆ ಒಂದೇ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಂದು ಮನೆಗೆ ಹಾಲು ತರಲು ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಶುಕ್ರವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಆನೇಕಲ್-ಚಂದಾಪುರ ಮುಖ್ಯರಸ್ತೆಯ ಪೊಲೀಸ್ ನಿವಾಸದೆದುರು ಘಟನೆ ಜರುಗಿದೆ.
ಮೃತನನ್ನು ಕಲಬುರಗಿ ಮೂಲದ ಆನೇಕಲ್ ಮೆಹಬೂಬ್ ಎಂಬವರ ಎರಡನೇ ಮಗ ಶಾಭಾಜ್ (17) ಎಂದು ಗುರುತಿಸಲಾಗಿದೆ. ಆನೇಕಲ್ ಎಎಸ್ಟಿ ಶಾಲೆಯಲ್ಲಿ ಶಾಭಾಜ್ ವ್ಯಾಸಂಗ ಮಾಡುತ್ತಿದ್ದನು. ಬೆಳಗ್ಗೆ ಹಾಲು ತರಲು ಬೈಕ್‌ನಲ್ಲಿ ಹೊರಟಿದ್ದ. ವೆಂಕಟೇಶ್ವರ ಚಿತ್ರಮಂದಿರದ ಕಡೆಯಿಂದ ಆನೇಕಲ್ ಕಡೆ ತೆರಳುವ ವೇಳೆ ಬಲಗಡೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಯುವಕನೊಬ್ಬ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಇನ್ನೊಂದೆಡೆ ಬಲಬದಿ ಪಕ್ಕದಲ್ಲಿಯೇ ಬಸ್ ಬಂದಿರುವುದರಿಂದ ಎಡಬದಿ ಯುವಕನಿಗೆ ಡಿಕ್ಕಿ ಹೊಡೆದು ಬೈಕ್ನೊಂದಿಗೆ ಬಾಲಕ ಕೆಳಗಡೆ ಬಿದ್ದಿದ್ದಾನೆ. ಕ್ಷಣಮಾತ್ರದಲ್ಲೇ ಬಸ್ ಆತನ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.