ಬೆಂಗಳೂರು:ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಅವರನ್ನು ಭೇಟಿ ಮಾಡಿದ ಸಚಿವರು, ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ. ''ಕೋವಿಡ್ ಅಕ್ರಮ ಕುರಿತ ನಿವೃತ್ತ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ತನಿಖಾ ಆಯೋಗ ಮಧ್ಯಂತರ ವರದಿ ನೀಡಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡಿ.ಕುನ್ಹಾ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಸಚಿವರು ಮನವಿ ಮಾಡಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ''ಪ್ರಲ್ಹಾದ್ ಜೋಶಿ ನ್ಯಾಯಾಂಗ ತನಿಖಾ ಆಯೋಗದ ಬಗ್ಗೆ ಹಾಗೂ ನಿವೃತ್ತ ನ್ಯಾಯಮೂರ್ತಿಯವರ ಬಗ್ಗೆ ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ಅಹಂಕಾರದ ಪರಮಾವಧಿ. ಜೋಶಿ ಸಾಮಾನ್ಯ ವ್ಯಕ್ತಿಯಲ್ಲ, ಅವರೊಬ್ಬ ಕೇಂದ್ರ ಸಚಿವರು. ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು, ಆಯೋಗಗಳ ಬಗ್ಗೆ ವೈಯುಕ್ತಿಕ ಟೀಕೆ ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ದವಾಗಿದೆ. ಕಾನೂನು ಬಾಹಿರವಾಗಿದೆ'' ಎಂದು ಕಿಡಿಕಾರಿದರು.
''ನ್ಯಾಯಮೂರ್ತಿಗಳನ್ನ ನಿಂದನೆ ಮಾಡುವುದು ಹಾಗೂ ಅವರ ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ಮತ್ತು ಒತ್ತಡ ಹೇರುವ ಕೆಲಸ ಇದು. ಭಯ ಹುಟ್ಟಿಸುವ ಕೆಲಸ ಇದು. ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು. ರಾಜ್ಯಪಾಲರಿಗೆ ಇದರ ಬಗ್ಗೆ ವಿವರಣೆ ನೀಡಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಉನ್ನತ ಸ್ಥಾನದಲ್ಲಿರುವ ನಾವು ಇಂತಹ ಸಂಸ್ಥೆಗಳ, ಆಯೋಗಗಳ ಗೌರವ ಕಾಪಾಡಬೇಕು. ರಾಷ್ಟ್ರಪತಿಗಳ ಗಮನಕ್ಕೂ ಇದನ್ನು ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಅಂತ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ಕೂಡಲೇ ಮುಂದೆ ಆ ರೀತಿ ಹೇಳಲ್ಲ ಅಂತ ಕ್ಷಮೆಯಾಚಿಸಬೇಕು'' ಎಂದು ಗುಂಡೂರಾವ್ ಒತ್ತಾಯಿಸಿದರು.
ಇದನ್ನೂ ಓದಿ:ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ, ಜಾಗೃತರಾಗಿರುವಂತೆ ದೇವೇಗೌಡರಿಂದ ಸಂದೇಶ: ಡಿ.ಕೆ. ಶಿವಕುಮಾರ್