ಬೆಂಗಳೂರು: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ಕೂಡ್ಲಿಗಿ ಮೂಲದ ಬಾಣಂತಿಯ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಮಾಹಿತಿ ಪಡೆದ ಸಚಿವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಹಿಂದಿನ ಪ್ರಕರಣಗಳು: ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ನಾಲ್ವರು ಬಾಣಂತಿಯರ ಸಾವು ಪ್ರಕರಣಕ್ಕೂ ಈ ಘಟನೆಗೆ ಸಂಬಂಧವಿಲ್ಲ. ಕೂಡ್ಲಿಗಿ ಗುಡೇಕೋಟೆ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಮಹಾಲಕ್ಷ್ಮಿ ಎಂಬವರು ವಿಮ್ಸ್ಗೆ ನ.24ರಂದು ದಾಖಲಾಗಿ 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಕುರಿತು ಆರೋಗ್ಯಾಧಿಕಾರಿಗಳಿಂದ ವರದಿ ಪಡೆಯಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿ ಸಾವು: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ
ವೈದ್ಯರ ನಿರ್ಲಕ್ಷ್ಯ- ಕುಟುಂಬಸ್ಥರ ಆರೋಪ: ಸಹಜ ಹೆರಿಗೆಯಾದ ಮಹಾಲಕ್ಷ್ಮಿಗೆ ಗಂಡು ಮಗು ಜನಿಸಿತ್ತು. ಹೆರಿಗೆಯ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಐಸಿಯುನಲ್ಲಿ ದಾಖಲಿಸಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಬಿಮ್ಸ್ ನಿರ್ದೇಶಕರ ಹೇಳಿಕೆ: ಈ ಕುರಿತು ಬಿಮ್ಸ್ ವೈದ್ಯ ಹಾಗೂ ನಿರ್ದೇಶಕ ಗಂಗಾಧರ ಗೌಡ ಪ್ರತಿಕ್ರಿಯೆ ನೀಡಿ, "ಮಹಾಲಕ್ಷ್ಮಿ ಅವರಿಗೆ ರಕ್ತಹೀನತೆ ಇತ್ತು. ಮೊದಲು ಅವರನ್ನು ಕೂಡ್ಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ನಂತರ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಈ ಬಗ್ಗೆ ನಾವು ಮೊದಲೇ ತಿಳಿಸಿದ್ದೆವು. ಅಲ್ಲದೇ ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ" ಎಂದು ಹೇಳಿದರು.
ಸಿಸೇರಿಯನ್ ಬಳಿಕ ಬಾಣಂತಿಯರ ಸಾವು: ಸೋಮವಾರ (ನ.25) ರಾತ್ರಿ ಹೊಸಪೇಟೆ ಮೂಲದ ಮುಸ್ಕಾನ್ (22) ಎಂಬ ಬಾಣಂತಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಸಾವು: ತನಿಖಾ ತಂಡ ರಚಿಸಿದ ಸರ್ಕಾರ, ಶಾಸಕರು ಹೇಳಿದ್ದಿಷ್ಟು!