ಶಿವಮೊಗ್ಗ:ನಗರದ ಹೊರವಲಯ ಗೋವಿಂದಪುರದಲ್ಲಿ ನಿರ್ಮಾಣವಾಗಿರುವ ಮೂರು ಸಾವಿರ ಮನೆಗಳ ಪೈಕಿ 652 ಮನೆಗಳನ್ನು ವಸತಿ ಸಚಿವ ಜಮೀರ್ ಅಹ್ಮದ್ ಇಂದು ಫಲಾನುಭವಿಗಳಿಗೆ ಹಂಚಿಕೆ ಮಾಡಿದರು. ಇದರೊಂದಿಗೆ ಸುಮಾರು 8 ವರ್ಷಗಳಿಂದ ಸ್ವಂತ ಸೂರಿಗಾಗಿ ಹಣ ಕಟ್ಟಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರ ಮುಖದಲ್ಲಿ ಮಂದಹಾಸ ಮೂಡಿತು.
2016ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ಸಮಿತಿ ಬೆಂಗಳೂರಿನ ಕೆಹೆಚ್ಬಿ ಹಾಗೂ ಸ್ಲಂ ಬೋರ್ಡ್ ನಿರ್ಮಾಣ ಮಾಡುವ ಬಹುಮಹಡಿ ಕಟ್ಟಡದಂತೆ ಶಿವಮೊಗ್ಗದಲ್ಲಿ ಜಿ+2 ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಿದ್ದಾಗ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಮನೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮೂರು ಲಕ್ಷ ರೂಪಾಯಿ ಹೊರೆ ಬಿದ್ದಿದೆ. ಮೊದಲು ಅರ್ಜಿ ಕರೆದಾಗ 4.50 ಲಕ್ಷಕ್ಕೆ ಮನೆ ನೀಡಲು ತೀರ್ಮಾನಿಸಲಾಗಿತ್ತು. ನಿರ್ಮಾಣ ಕಾರ್ಯ ವಿಳಂಬವಾದ ಕಾರಣ ಈಗ ಮೊತ್ತ 7 ಲಕ್ಷ ರೂ.ಗೆ ತಲುಪಿದೆ.
ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಶಾಸಕರ ಸಮ್ಮುಖದಲ್ಲಿ ಜಿ+2 ಮಾದರಿಯ ಮನೆಗಳನ್ನು ಲಾಟರಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.
ಸರ್ಕಾರದಿಂದ ಹೆಚ್ಚುವರಿ ಹಣ ಮರುಪಾವತಿ:ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, "ಈ ಹಿಂದೆ ಸುಮಾರು 624 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಈಗಾಗಲೇ ಮನೆಗಳನ್ನು ಪಡೆದ ಫಲಾನುಭವಿಗಳು ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬದಿಂದಾಗಿ ಹೆಚ್ಚುವರಿಯಾಗಿ ಎರಡು ಲಕ್ಷ ರೂಪಾಯಿ ಪಾವತಿಸಿರುವುದು ಗಮನಕ್ಕೆ ಬಂದಿದೆ. ಈ ಫಲಾನುಭವಿಗಳು ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ಮುಂದಿನ ಒಂದೂವರೆ ತಿಂಗಳೊಳಗಾಗಿ ಸರ್ಕಾರದ ವತಿಯಿಂದ ಹಿಂದಿರುಗಿಸಲಾಗುತ್ತದೆ" ಎಂದು ಭರವಸೆ ನೀಡಿದರು.
"ಬಡಾವಣೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸುಮಾರು 12 ಕೋಟಿ ರೂ ವೆಚ್ಚದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ರಾಜ್ಯದಲ್ಲಿ ಇದೇ ಯೋಜನೆಯಡಿ ನಿರ್ಮಾಣಗೊಳ್ಳಬೇಕಾಗಿದ್ದ 47,860 ಮನೆಗಳ ಕಾಮಗಾರಿ ಅಪೂರ್ಣಗೊಂಡಿದ್ದು, ಫಲಾನುಭವಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ 2,700 ಕೋಟಿ ಬಾಕಿ ಇದೆ" ಎಂದರು.
"ನಗರದ ಕೊಳಚೆ ನಿರ್ಮೂಲನೆ ಯೋಜನೆಯಡಿ ರಾಜ್ಯದಲ್ಲಿ 18.0253 ಮನೆಗಳು ಮಂಜೂರಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಂದ ಸುಮಾರು 7,400 ಕೋಟಿ ಮೊತ್ತ ಸರ್ಕಾರಕ್ಕೆ ಬರಬೇಕಾಗಿದೆ. ಅಲ್ಲದೇ ರಾಜೀವ್‌ಗಾಂಧಿ ವಸತಿ ಯೋಜನೆಯಡಿ 7,863 ಮನೆಗಳ ಫಲಾನುಭವಿಗಳಿಂದ ಸರ್ಕಾರಕ್ಕೆ 2,100 ಕೋಟಿ ಮೊತ್ತ ಸಂದಾಯವಾಗಬೇಕಿದೆ. ಒಟ್ಟಾರೆಯಾಗಿ 9,500 ಕೋಟಿಗೂ ಅಧಿಕ ಮೊತ್ತ ಸರ್ಕಾರಕ್ಕೆ ಪಾವತಿಯಾಗಬೇಕಾಗಿದೆ" ಎಂದು ತಿಳಿಸಿದರು.