ಮೈಸೂರು :ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಮೈಸೂರಿನಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ಮಾಡುತ್ತಿದೆ. ಎರಡು ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಜೊತೆಯಲ್ಲಿ ಯಾವತ್ತು ಬರದೇ ಇರುವ ಮಳೆ ಬಂದು ಜನರ ಜೀವನ ಅಸ್ತವ್ಯಸ್ತವಾಗಿದೆ. ಇದರ ಬಗ್ಗೆ ಸರ್ಕಾರ ಗಮನಹರಿಸದೇ ಇರುವುದು ವಿಪರ್ಯಾಸವಾಗಿದೆ. ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಒಂದು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ಕಾನೂನು ತನ್ನ ಕೆಲಸವನ್ನು ಮಾಡಲು ಶುರು ಮಾಡಿದೆ. ಇದೆಲ್ಲವನ್ನು ನೋಡಿದಾಗ ಜನರು ಎನ್ಡಿಎ ಪಕ್ಷಕ್ಕೆ ರಾಜ್ಯದಲ್ಲಿ ಒಲವನ್ನು ತೋರುತ್ತಿದ್ದಾರೆ ಎಂದರು.
ಎನ್ಡಿಎ ಪಕ್ಷಕ್ಕೆ ಗೆಲುವು : ಮೂರು ಕ್ಷೇತ್ರಗಳ ಉಪಚುನಾವಣೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಚನ್ನಪಟ್ಟಣದಲ್ಲಿ ಸಿ. ಪಿ ಯೋಗೇಶ್ವರ್ ಅವರ ಆತುರದ ನಿರ್ಧಾರದಿಂದ ಜನ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಸಂಶಯ ಸಾಮಾನ್ಯರಲ್ಲಿ ಕಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಜನರು ಈ ಉಪಚುನಾವಣೆ ಮೂಲಕ ನೀಡುತ್ತಾರೆ. ಮೂರಕ್ಕೆ ಮೂರು ಸ್ಥಾನವನ್ನು ನಮ್ಮ ಎನ್ಡಿಎ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು.
ಮುಡಾ ವಿಚಾರ :ಇದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಮುಡಾದಲ್ಲಿ ಇಷ್ಟೊಂದು ಅಕ್ರಮ ಆಗಿದೆ ಅಂದುಕೊಂಡಿರಲಿಲ್ಲ. ನಾನು ಈ ಹಿಂದೆ ಮೈಸೂರು ಜಿಲ್ಲಾ ಮಂತ್ರಿಯಾಗಿದ್ದೆ. ಅವಾಗ ನಾನು ಪ್ರತಾಪ್ ಸಿಂಹ ಎಲ್ಲರೂ ಕೂಡ ಮುಡಾದ ಸೈಟುಗಳ ಬಗ್ಗೆ ಮಾಹಿತಿ ಪಡೆದಿದ್ದೆವು. 7200 ಸೈಟುಗಳನ್ನು ಪತ್ತೆ ಹಚ್ಚಿ ಹರಾಜು ಹಾಕಲು ತೀರ್ಮಾನ ಮಾಡಿದ್ವಿ. ಈ ಹಿಂದೆ ಮೈಸೂರು ಡಿಸಿಯಾಗಿದ್ದ ಅಭಿರಾಮ್ ಜಿ ಶಂಕರ್, ಮುಡಾ ಆಯುಕ್ತರಾದ ಕಾಂತರಾಜ್ ಎಲ್ಲರೂ ಜನರ ಪರ ಕೆಲಸ ಮಾಡಲು ನಿರ್ಧಾರ ಮಾಡಿದ್ವಿ. ಆದ್ರೆ ಅದು ಆಗಲಿಲ್ಲ. ಈಗ ತನಿಖೆಗಳು ನಡೆಯುತ್ತಿವೆ. ಅಕ್ರಮ ಹೊರ ಬರಲಿ ಎಂದು ಹೇಳಿದರು.
ಯಡಿಯೂರಪ್ಪ ಪತ್ನಿ ಸಾವು ಬಗ್ಗೆ ಬೈರತಿ ಸುರೇಶ್ ಹೇಳಿಕೆಯ ಬಗ್ಗೆ ಮಾತನಾಡಿ, ಅವರು ಒಬ್ಬರು ಮಂತ್ರಿಯಾಗಿದ್ದಾರೆ. ಅವರು ಹೀಗೆ ಮಾತನಾಡುವುದು ಸರಿಯಲ್ಲ. ಶೋಭಾ ಕರಂದ್ಲಾಜೆ ಪುಟಕ್ಕಿಟ್ಟ ಚಿನ್ನ. ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ ಎಂದರು.
ನಿರುದ್ಯೋಗಳಿಗೆ ಉದ್ಯೋಗ ಮಂಜೂರಾತಿ ಪ್ರಮಾಣ ಪತ್ರ : ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಅರ್ಥ ಮಾಡಿಕೊಂಡು ಪ್ರಧಾನ ಮಂತ್ರಿ, ರೋಜ್ಗಾರ್ ಯೋಜನೆ ಮೂಲಕ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವಂತಹ ಕೆಲಸ ಆಗುತ್ತಿದೆ. ಇಂತಹ ಹತ್ತಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ ಎಂದರು.
ಸಿಎಂಗೆ ಕಷ್ಟ ಬಂದಾಗ ಚಾಮುಂಡಿ ತಾಯಿ ನೆನಪಾಗ್ತಾರೆ :ಮುಖ್ಯಮಂತ್ರಿಗಳಿಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗ್ತಾರೆ. ಕಷ್ಟ ಬಂದಾಗ ಮುಖ್ಯಮಂತ್ರಿಗಳ ಸಹಾಯಕ್ಕೆ ಬರುವುದು ನಮ್ಮ ದೇವತೆಗಳೇ ಹೊರತು, ಬೇರೆ ಧರ್ಮದವರಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.