ಹಾವೇರಿ:ಕಾನೂನು ಹೋರಾಟ ಪ್ರಾರಂಭವಾಗಿದೆ. ರಾಜ್ಯಪಾಲರು ತಪ್ಪಿತಸ್ಥರಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಇಂದು ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯಪಾಲರ ಮುಂದೆ ಅನೇಕ ಪ್ರಕರಣಗಳು ಹಲವು ವರ್ಷಗಳಿಂದ ಬಿದ್ದಿದ್ದಾವೆ. ಆದರೆ ಅವರು ನಿರ್ದಿಷ್ಟವಾಗಿ ಈ ಪ್ರಕರಣವನ್ನು ಎತ್ತಿಕೊಂಡಿರುವ ಉದ್ದೇಶವೆಂದರೆ ಜನರಿಂದ ಚುನಾಯಿತವಾದ ಸರ್ಕಾರವನ್ನು ಅಸ್ಥಿರಗೊಳಿಸುವುದಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದು ಬಿಜೆಪಿಯವರ ಮನಸ್ಸಿನಲ್ಲಿದೆ. ಇದು 2016ರಿಂದ ನಿರಂತರವಾಗಿ ನಡೆದಿದೆ ಎಂದು ದೂರಿದರು.
ಬಿಜೆಪಿಯವರು ಏಳೆಂಟು ಸರ್ಕಾರಗಳನ್ನು ವಾಮಮಾರ್ಗದಿಂದ ಕಿತ್ತುಹಾಕಿದ್ದಾರೆ. ಕರ್ನಾಟಕದಲ್ಲಿಯೂ ಸಹ ಇದು ಸಫಲವಾಗುತ್ತದೆ ಎಂಬ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳಾದ ನಾವು ಸಿದ್ದರಾಮಯ್ಯನವರ ಜೊತೆ ಇದ್ದೇವೆ, ಪಕ್ಷ ಅವರ ಜೊತೆ ಇದೆ. ಪಕ್ಷದ ವರಿಷ್ಠರು ಅವರ ಜೊತೆಗಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.