ಹುಬ್ಬಳ್ಳಿ :ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 30 ಲಕ್ಷ ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದ್ದು, ಇದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಸಾಲ ವಿತರಣೆ ಸಾಮರ್ಥ್ಯ ಕಡಿಮೆಯಾಗಲಿದೆ: ನಬಾರ್ಡ್ ನೀಡುವ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತದಿಂದಲೇ ಡಿಸಿಸಿ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ವಿತರಣೆ ಮಾಡುತ್ತವೆ. ರಾಜ್ಯದಲ್ಲಿ ಕೆಲವೇ ಡಿಸಿಸಿ ಬ್ಯಾಂಕುಗಳು ಮಾತ್ರ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ಇತರ ಡಿಸಿಸಿ ಬ್ಯಾಂಕುಗಳು ನಬಾರ್ಡ್ ನೀಡುವ ಹಣದಲ್ಲೇ ರೈತರಿಗೆ ಕೃಷಿಸಾಲ ನೀಡುತ್ತವೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯ ಕಡಿಮೆಯಾಗಲಿದೆ. ಇದರಿಂದ ಕೃಷಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
30 ರಿಂದ 35 ಲಕ್ಷ ರೈತರು ಮಾತ್ರ ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಆಶ್ರಯಿಸಿದ್ದಾರೆ. ಇತರ ಸುಮಾರು 35 ಲಕ್ಷ ರೈತರು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಎಲ್ಲ ರೈತರಿಗೂ ಸಹಕಾರಿ ಬ್ಯಾಂಕುಗಳ ಮೂಲಕವೇ ಕೃಷಿ ಸಾಲ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ. ಆದರೆ ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಈ ಉದ್ದೇಶಕ್ಕೆ ಪೆಟ್ಟು ಬೀಳಲಿದೆ ಎಂದು ಹೇಳಿದರು.
ಸಾಲದ ಮೊತ್ತವನ್ನು ಕಡಿಮೆ ಮಾಡಬಾರದು; ನಬಾರ್ಡ್ ವರ್ಷದಿಂದ ವರ್ಷಕ್ಕೆ ರಿಯಾಯಿತಿ ಬಡ್ಡಿ ದರದ ಸಾಲ ಕಡಿಮೆ ಮಾಡುತ್ತ ಬಂದಿದ್ದು, ಈಗ ಸುಮಾರು 20 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಿಶತ 40 ರಷ್ಟು ಇದ್ದ ಸಾಲದ ಪ್ರಮಾಣ ಈಗ ಪ್ರತಿಶತ 20ಕ್ಕೆ ಬಂದಿದೆ. ಕೃಷಿ ವಲಯದ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ ಸಾಲದ ಮೊತ್ತವನ್ನು ಕಡಿಮೆ ಮಾಡಬಾರದು ಎಂದು ಸಚಿವರು ಹೇಳಿದರು.