ಬೆಂಗಳೂರು: ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಆರೋಪಿ ಪರಶುರಾಮ್ ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆಂಬ ಎಂಬ ಆರೋಪಿಸಿದ ವಿಚಾರವಾಗಿ ಬೆಂಗಳೂರಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ತನಿಖೆ ನಡೆಸಲಿ, ಬೇಡ ಅಂದವರು ಯಾರು?. ಕಳೆದ ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇರಲಿಲ್ಲ. ವಿಕಾಸಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿ ಸರ್ಕಾರದ ಕಚೇರಿ. ಅಲ್ಲಿಗೆ ಸಾಕಷ್ಟು ಜನ ಬರುತ್ತಾರೆ, ಹೋಗುತ್ತಾರೆ ಎಂದರು.
ಬಂಧಿತ ಪರಶುರಾಮ್ ಸಚಿವರ ಕಚೇರಿಯಲ್ಲಿ ಅಂತಾ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಅಂತಾ ಹೇಳಿಲ್ಲ. ಅಂದು ನಾನು ಕಚೇರಿಗೆ ಹೋಗಿಲ್ಲ. ನಮ್ಮ ಕಚೇರಿಯಲ್ಲಿ ಸಭೆ ಆಗಿರುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಕಚೇರಿ ಸಿಬ್ಬಂದಿಯನ್ನ ಕೇಳಿದೆ. ಆ ರೀತಿ ಯಾವುದೇ ಸಭೆ ಆಗಿಲ್ಲ ಅಂತಾ ಹೇಳಿದರು. ಶಾಸಕರು ಬರುತ್ತಾರೆ, ಹೋಗುತ್ತಾರೆ ಅಂತಾ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೂ ನನಗೂ ಸಂಬಂಧ ಇಲ್ಲ ಎಂದು ತಿಳಿಸಿದರು.