ಬೆಳಗಾವಿ:"ಕಂಡಕ್ಟರ್ ಮೇಲಿನ ಹಲ್ಲೆ ಘಟನೆ ಸಂಬಂಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಇಲ್ಲಿಗೆ ಯಾವುದೇ ಸಂಘಟನೆ ಬಂದರೂ ಹೊಡೆತ ಬೀಳುವುದು ನಮಗೆ. ಅದನ್ನು ಗಮನಿಸಬೇಕಾಗುತ್ತದೆ. ಹಾಗಾಗಿ, ಬೆಳಗಾವಿ ಚಲೋ ಕೈ ಬಿಡಬೇಕು" ಎಂದು ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪೊಲೀಸರು ಮತ್ತು ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿದ್ದಾರೆ. ಇಬ್ಬರ ಮಧ್ಯೆ ನಡೆದ ಜಗಳ ಅಷ್ಟೇ ಅದು. ಯಾವುದೇ ಸಂಘಟನೆ, ಭಾಷೆಗೆ ಹೋಗಬಾರದು ಎಂಬುದು ನಮ್ಮ ಮನವಿ. ಈ ರೀತಿ ಘಟನೆ ಏನೂ ಹೊಸದಲ್ಲ. ಇಡೀ ರಾಜ್ಯದಲ್ಲಿ ಪ್ರತಿದಿನ ಒಂದು ಕಡೆ ನಡೆಯುತ್ತವೆ. ಆದರೆ, ಅದು ಅಲ್ಲಿಯೇ ಮುಗಿಯುತ್ತದೆ. ಪೊಲೀಸ್ ಠಾಣೆಗೆ ಬಸ್ಸನ್ನೇ ತೆಗೆದುಕೊಂಡು ಹೋದ ಉದಾಹರಣೆಗಳೂ ಸಾಕಷ್ಟಿವೆ. ಪೊಲೀಸರು ಮತ್ತು ಕಾನೂನಿಗೆ ಆ ವಿಚಾರವನ್ನು ಬಿಡಬೇಕು. ಕನ್ನಡ-ಮರಾಠಿ ಸಂಘಟನೆ ಎಂದು ಬಿಂಬಿಸಬಾರದು" ಎಂದರು.
ಪೋಕ್ಸೋ ಕೇಸ್ ಹಾಕಬಾರದಿತ್ತು: "ಪೊಲೀಸರು ಎರಡೂ ಕಡೆ ತನಿಖೆ ಮಾಡುತ್ತಿದ್ದಾರೆ. ಆದರೆ, ಪೋಕ್ಸೋ ಕೇಸ್ ಹಾಕಬಾರದಿತ್ತು. ನೂರು ಜನರ ಮುಂದೆ ಆದ ಘಟನೆ ಇದು. ಹಾಗಾಗಿ, ಆ ಪ್ರಶ್ನೆ ಬರುವುದಿಲ್ಲ. ಇದರಲ್ಲಿ ಪೊಲೀಸರಿಂದ ತಪ್ಪಾಗಿದೆ ಎಂಬುದು ಕೂಡ ನನ್ನ ಭಾವನೆ. ಮುಂದೆ ಕಾನೂನಿನಲ್ಲಿ ಸರಿಮಾಡಲು ಅವಕಾಶವಿದೆ. ಅದೊಂದು ಸಾಮಾನ್ಯ ಕೇಸ್ ಆಗಬೇಕು" ಎಂದು ಅಭಿಪ್ರಾಯಪಟ್ಟರು.