ಹುಬ್ಬಳ್ಳಿ:"ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರಿಗೆ ಮಾತನಾಡಲು ಪಾಕಿಸ್ತಾನ, ಅಫ್ಘಾನಿಸ್ತಾನ, ಟೆರರಿಸ್ಟ್ ಪದಗಳು ಬಿಟ್ಟರೆ, ಅಭಿವೃದ್ಧಿ ವಿಚಾರಗಳೇ ಇಲ್ಲ. ಇಂತಹ ವಿಚಾರಗಳ ಮೇಲೆಯೇ ಚುನಾವಣೆ ಎದುರಿಸಲು ಹೋಗುತ್ತಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಸ್ ಲಾಡ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಐದು ಪದಗಳು ಬಿಟ್ಟರೆ ಬೇರೆ ಪದಗಳೇ ಗೊತ್ತಿಲ್ಲ. ಒಂದು ವಿಷಯವನ್ನಿಟ್ಟುಕೊಂಡು ಚುನಾವಣೆ ಎದುರಿಸಲು ಹೋಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ?, ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೇ?. ಇದೀಗ ಸಿಎಂ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಆಗ ಪ್ರಧಾನಿ ನರೇಂದ್ರ ಮೋದಿಯವರು ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕಿತ್ತಲ್ಲವೆ" ಎಂದು ಪ್ರಶ್ನಿಸಿದರು.
"ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಲ್ವಾ?, ಶೆಟ್ಟರ್ ಇದರ ಬಗ್ಗೆ ಏನ್ ಹೇಳ್ತಾರೆ?. ಎಲ್ಲ ಉತ್ತರಗಳೂ ಅವರ ಬಳಿಯೇ ಇವೆ. ಶೆಟ್ಟರ್ ಸದ್ಯ ಬಹಳ ಸ್ಪೀಡ್ನಲ್ಲಿದ್ದಾರೆ" ಎಂದರು.
"ಕೇಂದ್ರ ಸರ್ಕಾರ ನರೇಗಾ ಯೋಜನೆ ಕೂಲಿ ಹಣ ಬಿಡುಗಡೆ ಮಾಡಬೇಕು. ಆದರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ರಾಜ್ಯಕ್ಕೆ 1,400 ಕೋಟಿ ರೂಪಾಯಿ ಹಣ ಬಾಕಿವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ" ಎಂದು ಟೀಕಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಯಾವುದೇ ರೀತಿಯಲ್ಲೂ ಅಕ್ರಮ ನಡೆದಿಲ್ಲ" ಎಂದ ಲಾಡ್ ಇದೇ ವೇಳೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.