ಧಾರವಾಡ: ಇದು ನನ್ನ ಚುನಾವಣೆಯಲ್ಲ, ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಮಾಡಿದ್ದೇನೆ ಅಂತಾ ಹೇಳುವೆ. ಈಗ ಜೋಶಿ ಅವರ ಚುನಾವಣೆ ನಡೆದಿದೆ. ಅವರೇನು ಮಾಡಿದ್ದಾರೆ ಹೇಳಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ಸಲ, 20 ವರ್ಷ ಎಂಪಿ ಆಗಿದಿರೀ.. ಈ ಅವಧಿಯಲ್ಲಿ ನೀವೇನು ಮಾಡಿದಿರಿ ಹೇಳಿ. ಜನರತ್ತ ನಾನು ಹೋಗಿ ನನ್ನ ಕೆಲಸ ಹೇಳುವೆ ಎಂದು ಜೋಶಿ ವಿರುದ್ಧ ಹರಿಹಾಯ್ದರು.
ನನಗೆ ಸಿದ್ದರಾಮಯ್ಯ ಬೈಯೋಕೆ ಇಟ್ಟಿದಾರೆಂಬ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ನನಗೆ ಇವರನ್ನು ಬೈಯಲು ಸಿದ್ದರಾಮಯ್ಯ ಇಟ್ಟಿರಬಹುದು. ಹಾಗಾದರೆ ಇವರನ್ನು ಮೋದಿ ಸುಳ್ಳು ಹೇಳೋಕೆ ಇಟ್ಟಿದಾರಾ?.. ವಿಶ್ವದಲ್ಲಿ ಸುಳ್ಳು ಹೇಳುವ ಪಕ್ಷ ಬಿಜೆಪಿ. ಅದರಲ್ಲಿ ನಂ. 1 ಪ್ರಹ್ಲಾದ ಜೋಶಿ. ಪದೇ ಪದೇ ಜೋಶಿಯವರೇ ಸುಳ್ಳು ಹೇಳಬೇಡಿ. ಅಭಿವೃದ್ಧಿ ವಿಷಯದಲ್ಲಿ ಬನ್ನಿ ಮಾತನಾಡೋಣ. ನೀವು, ಹಿರಿಯ ನಾಯಕರು ನಿಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ. ಇವತ್ತು ದರಗಳ ಏರಿಕೆಯಾಗಿದೆ. ಅದರ ಬಗ್ಗೆ ನಾವು ಯಾರನ್ನು ಪ್ರಶ್ನೆ ಕೇಳಬೇಕು ಎಂದು ಪ್ರಶ್ನಿಸಿದರು.
ರೂಪಾಯಿ ಮೌಲ್ಯ ಕುಸಿದಿದೆ. ಇದರ ಬಗ್ಗೆ ಉತ್ತರ ಕೊಡುವವರು ಯಾರು. ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರ ಕೊಡುವವರಾರು?. ನೀವು ದೇಶದ ಸಮಸ್ಯೆಗಳ ಬಗ್ಗೆ ಯಾಕೆ ಉತ್ತರ ಕೊಡುವುದಿಲ್ಲ. 2ಜಿ ಹಗರಣದ ಬಗ್ಗೆ ಮಾತನಾಡುತ್ತಾರೆ?, 10 ವರ್ಷ ಅಧಿಕಾರದಲ್ಲಿದ್ರಲ್ವಾ.. ಯಾಕೆ ತಪ್ಪು ಮಾಡಿದವರನ್ನು ಹಿಡಿದು ಒಳಗೆ ಹಾಕಲಿಲ್ಲ. ಬಿಎಸ್‌ಎನ್‌ಎಲ್‌ಗೆ ಯಾಕೆ 4ಜಿ ಲೈಸೆನ್ಸ್ ಕೊಡಲಿಲ್ಲ. 4ಜಿ ಬಂದಾಗ ಜಿಯೋ ನಂ.1 ಆಯ್ತಲ್ಲ. ಬಿಎಸ್‌ಎನ್‌ಎಲ್ ಯಾಕೆ ನಂ. 1 ಆಗಲಿಲ್ಲ. ನಾನು ಏನೇ ಮಾಡಿದರೂ ದೊಡ್ಡದಾಗಿ ಮಾಡುವೆ ಅಂತಾ ಮೋದಿ ಹೇಳ್ತಾರೆ. ಬಿ.ಎಸ್.ಎನ್.ಎಲ್ ಏನಾಯ್ತು. ರಫೇಲ್ ಏನಾಯ್ತ?. ಅನಿಲ ಅಂಬಾನಿ ಕಂಪನಿ ಒಂದು ಸೈಕಲ್ ತಯಾರಿಸಿಲ್ಲ. ಅದು ಒಂದೇಟಿಗೆ ಹೆಲಿಕಾಪ್ಟರ್ ತಯಾರಿಸಬಹುದಾ.. ಅದರ ಡೀಲ್ ಅವರಿಗೆ ಹೇಗೆ ಹೋಯ್ತು?. ಇದೆಲ್ಲದರ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ. ಸುಮ್ಮನೇ ಲಾಡ್ ಬೈತಾರೆ ಅಂತಾ ಹೇಳ್ತಾರೆ. ಇದು ಅವರ ಘನತೆಗೆ ಗೌರವ ತರುವಂತಹುದಲ್ಲ, ನಾನು ಜೋಶಿ-ಮೋದಿಗೆ ಬೈದಿಲ್ಲ, ಪ್ರಶ್ನೆ ಕೇಳಿದರೆ ಬೈಯದಂತೆನಾ?. ಈ ಪ್ರಶ್ನೆಗೆ ಉತ್ತರ ಕೊಡಿ ಎಂದರು.