ಕರ್ನಾಟಕ

karnataka

By ETV Bharat Karnataka Team

Published : Mar 13, 2024, 9:08 AM IST

ETV Bharat / state

ಮಹಿಳಾ ಸಮಾನತೆ, ಸಬಲೀಕರಣ ಕೆಎಸ್​ಆರ್​ಟಿಸಿಯಲ್ಲಿ ಅಕ್ಷರಶಃ ಕಾಣಬಹುದು: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹಿಳೆಯರ ಸಮಾನತೆ ಕುರಿತು ಮಾತನಾಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಂಗಳೂರು:ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶಾಂತಿನಗರದಲ್ಲಿರುವ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, 'ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿಗಳು ಪುರುಷ ಸಿಬ್ಬಂದಿಗಳಷ್ಟೇ ಹೆಚ್ಚಿನ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸಿ, ವಾಹನಗಳ ಪುನಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ' ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

'ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ. ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ' ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗೌರಿ ನಾಯಕ್​ ಅವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿ, 'ಇದೇ ರೀತಿಯಲ್ಲಿ ಅವರು ಕಾರ್ಯವನ್ನು ಮುಂದುವರೆಸಲು ದೇವರು ಶಕ್ತಿ ಮತ್ತು ಆಯಸ್ಸನ್ನು ನೀಡುವಂತೆ ಹಾರೈಸಿದರು. ಅಂಗನವಾಡಿ ಆವರಣದಲ್ಲಿ ಅವರು ತೆರೆದಿರುವ ಬಾವಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನಿಗಮದ ವತಿಯಿಂದ 1 ಲಕ್ಷ ರೂ.ಗಳನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ' ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕೆಎಸ್​​ಆರ್​ಟಿಸಿ ಎಂಡಿ ವಿ. ಅನ್ಬುಕುಮಾರ್ ಮಾತನಾಡಿ, 'ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಅಭಿವೃದ್ದಿ ಹೊಂದುತ್ತಿರುವುದು ಸ್ವಾಗತಾರ್ಹ. ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಬ್ಯಾಸವನ್ನು ದೊರಕಿಸಿಕೊಟ್ಟು, ಸಬಲರನ್ನಾಗಿ ಮಾಡಬೇಕು. ಶಿಕ್ಷಣ ಒಂದೇ ಮಹಿಳೆಯರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧನವಾಗಿದೆ' ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಾಸಿಯಾದ ಗೌರಿ ನಾಯಕ್ ಅವರನ್ನು ಗೌರವಿಸಿ, ಗೌರವಧನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಇವರು ತಮಗೆ ಜೀವನಾಧಾರವಾಗಿದ್ದ ತೋಟಕ್ಕೆ ನೀರಿಲ್ಲದ ಸಮಯದಲ್ಲಿ ಎದೆಗುಂದದ ಛಲದಿಂದ ತಮ್ಮ ತೋಟದಲ್ಲಿ 75 ಅಡಿ ಆಳದ ಬಾವಿ ತೆಗೆದು ನೀರಿನ ಆಧಾರ ಮಾಡಿಕೊಂಡಿದ್ದಾರೆ. ಇದುವರೆಗೂ ಮೂರು ಬಾವಿಯನ್ನು ಏಕಾಂಗಿಯಾಗಿ ತೆಗೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಅಂಗನವಾಡಿಯ ಮಕ್ಕಳ ಉಪಯೋಗಕ್ಕಾಗಿ ಮೂರನೆಯ ಬಾವಿ ತೆರೆದ ಸಾಧಕಿ ಇವರು! ಅಂಗನವಾಡಿ ಆವರಣದಲ್ಲಿ ಶಾಲೆಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಮನೆಗಳಿಗೂ ಸಹ ನೀರು ದೊರಕಿಸುವಂತೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗೌರಿ ನಾಯಕ್​, 'ತಮ್ಮ ಸೇವೆಯನ್ನು ಗುರುತಿಸಿ ನಿಗಮವು ಸನ್ಮಾನ ಮಾಡುತ್ತಿರುವುದು ತಮಗೆ ಹರ್ಷವನ್ನು ಉಂಟು ಮಾಡಿದ್ದು, ಇದು ತಮ್ಮನ್ನು ಈ ರೀತಿಯ ಸಮಾಜ ಮುಖಿ ಸೇವೆಯಲ್ಲಿ ಮುಂದುವರೆಯಲು ಪ್ರೇರಣೆಯಾಗಿದೆ' ಎಂದರು. ಹಾಗೆಯೇ, ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ನಿರ್ವಾಹಕಿಯರು, ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯ ಪೈಕಿ ಒಟ್ಟು 41 ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:ಬೆಳಗಾವಿ ನೀರಾವರಿ ಇಲಾಖೆ ಎಂಡಿ ಎಳೆದಾಡಿದ ಮಹಿಳೆಯರು: ಪರಿಹಾರಕ್ಕಾಗಿ ಪಟ್ಟು

ABOUT THE AUTHOR

...view details