ಕರ್ನಾಟಕ

karnataka

ETV Bharat / state

ಆಯೋಗ ನೀಡುವ ವರದಿ ಆಧಾರದ ಮೇಲೆ ಬಿಜೆಪಿ ಸರ್ಕಾರದ ಶೇ40ರಷ್ಟು ಕಮಿಷನ್ ಸತ್ಯಾಸತ್ಯತೆ ಹೊರಬರಲಿದೆ : ಸಚಿವ ಪ್ರಿಯಾಂಕ ಖರ್ಗೆ

ಸಚಿವ ಪ್ರಿಯಾಂಕ ಖರ್ಗೆ ಅವರು ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಕುರಿತು ಮಾತನಾಡಿದ್ದಾರೆ. ಆಯೋಗ ನೀಡುವ ವರದಿ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.

minister-priyank-kharge
ಸಚಿವ ಪ್ರಿಯಾಂಕ ಖರ್ಗೆ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು : ಬಿಜೆಪಿಯ 40% ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ, ಅಕ್ರಮದ ನಿರಾಕರಣೆಯೂ ಅಲ್ಲ ಎಂದು ಕಮಿಷನ್ ವಿಚಾರದಲ್ಲಿ ತನಿಖೆ ನಡೆಸಿದ್ದ ಲೋಕಾಯುಕ್ತದಲ್ಲಿ ಆರೋಪ ಸಾಬೀತಾಗಿಲ್ಲ ಎಂಬ ಬಿಜೆಪಿ ವಾದಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇವಲ ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆ. ಇದು ಬಿಜೆಪಿಯ 40% ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ ಅಥವಾ ಅಕ್ರಮದ ನಿರಾಕರಣೆಯೂ ಅಲ್ಲ. ಆರೋಪ ಮಾಡಿದವರು ಅಕಾಲಿಕ ಮರಣದಿಂದಾಗಿ ಸಾಕ್ಷ್ಯಾಧಾರಗಳ ಕೊರತೆ ಉಂಟಾದ್ದರಿಂದ ಆರೋಪವನ್ನು ತನಿಖೆಯಲ್ಲಿ ಸಾಬೀತು ಮಾಡಲು ಸಾಧ್ಯವಾಗಿರುವುದಿಲ್ಲ, ಗುತ್ತಿಗೆದಾರರು ಮಾಡಿದ್ದ ಇತರ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಲು ಬಿಜೆಪಿ ಸರ್ಕಾರ ಮುಂದಾಗಲೇ ಇಲ್ಲ. ಇದು ಬಿಜೆಪಿಯವರ ಜಾಣ ಕುರುಡುತನವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತನಿಖಾಧಿಕಾರಿಯು ತನಿಖೆಯ ವಿಚಾರವಾಗಿ ಅಂಬಿಕಾಪತಿ ಅವರ ಮನೆಗೆ ತೆರಳಿದಾಗ ಅಂಬಿಕಾಪತಿ ಮರಣ ಹೊಂದಿರುತ್ತಾರೆ. ಅವರ ಪುತ್ರನಿಗೆ ತಂದೆ ಮಾಡಿದ್ದ ಆರೋಪದ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ತನಿಖಾಧಿಕಾರಿ ಅಂಬಿಕಾಪತಿಯವರ ಮರಣ ಪ್ರಮಾಣಪತ್ರವನ್ನು ಪಡೆದು ಹಿಂತಿರುಗುತ್ತಾರೆ. ವಿವಿಧ ಇಲಾಖೆಗಳಲ್ಲಿನ 40% ಕಮಿಷನ್ ಆರೋಪದ ಕುರಿತ ಸಮಗ್ರ ತನಿಖೆಗಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಆಯೋಗವು ನೀಡುವ ವರದಿಯ ಆಧಾರದ ಮೇಲೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಕುರಿತ ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.

ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ PSI ಹಗರಣ, ಗಂಗಾಕಲ್ಯಾಣ ಹಗರಣ, KKRDB ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಹಗರಣಗಳು ನಡೆದಿದ್ದರೂ ಅವುಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ ಈಗ ಅವೆಲ್ಲಾ ಹಗರಣಗಳು ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗುತ್ತಿವೆ. 545 PSI ಹಗರಣ ನಡೆದೇ ಇಲ್ಲವೆಂದು ವಾದಿಸುತ್ತಿದ್ದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ.

ನಮ್ಮ ಸರ್ಕಾರವು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಕೋವಿಡ್ ಅವಧಿಯಲ್ಲಿ ನಡೆದಿದ್ದ ಅಕ್ರಮ ಸಾಬೀತಾಗಿದ್ದು, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಬಿ ಶ್ರೀ ರಾಮುಲು ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಸೆಕ್ಷನ್ 7 ಹಾಗೂ ಸೆಕ್ಷನ್ 11ರ ಅಡಿ ವಿಚಾರಣೆ ನಡೆಸಬಹುದೆಂದು ವರದಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.

ತನಿಖಾ ತಂಡ ರಚಿಸಲಾಗಿದೆ: KKRDB ಯಲ್ಲಿಯೂ ಸಹ ಹಗರಣ ನಡೆದೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ, ಈಗ ನಿವೃತ್ತ IAS ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿನ ಅಕ್ರಮ ನಿರಾಕರಿಸಲಾಗಿತ್ತು. ಆದರೆ, ಇಲಾಖಾ ತನಿಖೆಯಲ್ಲಿ ಆರೋಪ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ದಿವಂಗತ ಆರ್. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು PWD, ಆರೋಗ್ಯ, ವಸತಿ, ಉನ್ನತ ಶಿಕ್ಷಣ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳಲ್ಲಿನ ಕಮಿಷನ್ ಹಾಗೂ ಕೋಲಾರ ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾದ ಮುನಿರತ್ನ ಅವರ ವಿರುದ್ಧ ಲಂಚದ ಆರೋಪ ಹಾಗೂ ಕರ್ನಾಟಕ ಖಾಸಗಿ ಶಾಲಾ ಮಾಲೀಕರ ಎರಡು ಸಂಘಟನೆಗಳ ಲಂಚದ ಆರೋಪ, ಅಲ್ಲದೇ ಪಾವಗಡ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲಿ ಲಂಚದ ಅಕ್ರಮದ ಬಗ್ಗೆ ಆರೋಪಿಸಿದ್ದರು. ಆದರೆ, ಹಿಂದಿನ ಬಿಜೆಪಿ ಸರ್ಕಾರ ತನಿಖೆಗೆ ವಹಿಸಿದ್ದು, ಕೇವಲ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪ ಮಾತ್ರ ಎಂದಿದ್ದಾರೆ.

ಲೋಕಾಯುಕ್ತ ತನಿಖೆಗೆ ವಹಿಸಿದ್ದು 27/03/2023 ರಂದು, ಅಂದು ಬಿಜೆಪಿ ಸರ್ಕಾರವಿತ್ತು. ಈ ಸಂದರ್ಭದಲ್ಲಿ ಖಾಸಗಿ ಚಾನಲ್​ನಲ್ಲಿ ನೀಡಿದ ಹೇಳಿಕೆಯೊಂದನ್ನು ಆಧರಿಸಿ ತನಿಖೆಗೆ ವಹಿಸಿದ ಬಿಜೆಪಿ ಸರ್ಕಾರ ಇನ್ನುಳಿದ ಆರೋಪಗಳನ್ನು ತನಿಖೆಗೆ ವಹಿಸಲಿಲ್ಲ ಏಕೆ?. ಇದಲ್ಲದೆ 40% ಕಮಿಷನ್​ಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಏಕೆ ತನಿಖೆಗೆ ವಹಿಸಲು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಚಾರಣಾಧಿಕಾರಿಗಳು ವರದಿಯನ್ನು ಸಲ್ಲಿಸಿರುತ್ತಾರೆ :ಲೋಕಾಯುಕ್ತ ವರದಿಯಲ್ಲಿ ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ, ಸದರಿಯವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಅಂಬಿಕಾಪತಿಯವರು ಮಾಡಿರುವ ಆಪಾದನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ :ಆಪರೇಷನ್ ಕಮಲ ಆರಂಭ ಮಾಡಿದ್ದೇ ಬಿಜೆಪಿ, ಇದೇ ಅವರ ಮಾಡೆಲ್ : ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details