ಬೆಂಗಳೂರು: ''ಕರ್ನಾಟಕದಲ್ಲಿ ಆಪರೇಷನ್ ಕಮಲ ಮೊದಲು ಆರಂಭ ಮಾಡಿದ್ದೇ ಬಿಜೆಪಿ. ನಂತರ ಇದನ್ನು ದೇಶದ ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋದರು. ಇದೇ ಬಿಜೆಪಿಯವರ ಮಾಡೆಲ್'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಬಿಜೆಪಿ ಸಂಘಟನಾತ್ಮಕವಾಗಿ ಕುಗ್ಗಿರುವ ರಾಜ್ಯಗಳಲ್ಲಿ ಇಡಿ, ಐಟಿ ಬಳಕೆಯಾಗುತ್ತಿದೆ. ಉಳಿದ ಕಡೆ ರಾಜ್ಯಪಾಲರ ದುರುಪಯೋಗ ಮಾಡುತ್ತಾರೆ. ಆಪರೇಷನ್ ಕಮಲ ಮಾಡುತ್ತಿರುವುದಕ್ಕೆ ಸಾಕ್ಷಿ ಇದೆ. ಮಹಾರಾಷ್ಟ್ರದಲ್ಲಿ ಉದ್ಯಮಿ ಅದಾನಿ ಜೊತೆ ಸೇರಿ ಸರ್ಕಾರ ಬೀಳಿಸಿದರು. ಸರ್ಕಾರ ಬೀಳಿಸಿದ ಉದಾಹರಣೆಗಳು ಬಹಳಷ್ಟು ಇದೆ'' ಎಂದು ವಾಗ್ದಾಳಿ ನಡೆಸಿದರು.
''ನಮ್ಮ ಪಕ್ಷದ ಶಾಸಕ ಸ್ನೇಹಿತರನ್ನು ಸಂಪರ್ಕ ಮಾಡಿದ್ದಾರೆ. ಅದನ್ನು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ. ಆದರೆ, ಅದು ಕಾರ್ಯಗತ ಆಗುವುದಿಲ್ಲ. ಬಿಜೆಪಿ ನಾಯಕರು ಸರ್ಕಾರ ಬಿಳಿಸಲು ಸಾವಿರ ಕೋಟಿ ರೆಡಿ ಇದೆ ಅಂತಾರೆ. ಹಾಗಾದರೆ ಈ ಹಣ ಎಲ್ಲಿಂದ ಬಂತು. ಸಾವಿರ ಕೋಟಿ ರೂ ಸಂಗ್ರಹ ಹೇಳಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ. ಆರೋಪಿತ ನಾಯಕರ ಮೇಲೆ ಮನಿ ಲ್ಯಾಂಡ್ರಿಂಗ್ ಕೇಸಿಲ್ವಾ ?. ಒಂದು ಸಾವಿರ ಕೋಟಿ ರೂ. ಯಾವ ದುಡ್ಡು ಅದು? ಅದಾನಿ ದುಡ್ಡಾ ಅಥವಾ ಶೇ 40ರಷ್ಟು ಕಮಿಷನ್ ದುಡ್ಡಾ?'' ಎಂದು ಟೀಕಿಸಿದರು.
40% ಅಲ್ಲ, 400% ಸರ್ಕಾರ:40 ಪರ್ಸೆಂಟ್ ಆರೋಪ ನಿರಾಧಾರ ಎಂದು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ''40% ನಿರಾಧಾರ ಅನ್ನುವುದಾದರೆ ಕುನ್ಹಾ ಅವರ ಆಯೋಗ ಕ್ರಮಕ್ಕೆ ಯಾಕೆ ಸೂಚಿಸಿದೆ. 300 ರೂ. ಕಿಟ್ಗೆ 2 ಸಾವಿರ ರೂ. ಕೊಟ್ಟು ಖರೀದಿಸಿದ್ದಾರೆ. ಅದು 40% ಸರ್ಕಾರ ಅಲ್ಲ, 400% ಸರ್ಕಾರ. ಒಂದು ಕೇಸ್ನಲ್ಲಿ ಎಫ್ಐಆರ್ ದಾಖಲಿಸಲು ಆಯೋಗ ಸೂಚಿಸಿದೆ. ಬಿಜೆಪಿಯವರಿಗೆ ಜೈಲಿಗೆ ಹೋಗಲು ಯಾಕಿಷ್ಟು ಅವಸರ. ಉಪಸಮಿತಿ ವರದಿ ಬಂದ ಮೇಲೆ ಕ್ರಮ ಆಗಲಿದೆ. ಈ ಸಂಬಂಧ ಎಸ್ಐಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಮಾಡುತ್ತಾರೆ. ಒಳ್ಳೆಯ ಅಧಿಕಾರಿಯನ್ನು ನೇಮಕ ಮಾಡಿ ಎಸ್ಐಟಿ ರಚಿಸುತ್ತಾರೆ'' ಎಂದು ಹೇಳಿದರು.
ಬಿಪಿಎಲ್ ಮಾನದಂಡ ಕೇಂದ್ರ ಸರ್ಕಾರದ್ದು:ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಬಿಪಿಎಲ್ ಮಾನದಂಡದ ಪ್ರಕಾರ ಕ್ರಮ ಆಗಿದೆ. ಬಿಪಿಎಲ್ ಮಾನದಂಡವು ಕೇಂದ್ರ ಸರ್ಕಾರದ ಮಾನದಂಡವಾಗಿದೆ. ಅರ್ಹರಿಗೆ ನ್ಯಾಯ ಸಿಗಬೇಕಲ್ಲವೇ, ಅರ್ಹರಿಗೆ ಅಕ್ಕಿ ಸಿಗುವ ಕೆಲಸ ಮಾಡಲಾಗಿದೆ. ಬಡವರ ದುಡ್ಡು ಬಡವರಿಗೆ ಹೋಗಲಿದೆ. ಮಾನದಂಡ ಬದಲಾವಣೆ ಕೇಂದ್ರ ಸರ್ಕಾರ ಮಾಡಿದರೆ ಮಾಡಲಿ. ಅದನ್ನು ಅನುಸರಿಸುತ್ತೇವೆ'' ಎಂದರು.
ಸ್ವಾಮೀಜಿಗಳು ಮಾರ್ಗದರ್ಶಕರಾಗಿರಬೇಕು: ಸಚಿವ ಕೆ.ಹೆಚ್.ಮುನಿಯಪ್ಪ ಅವರನ್ನು ಸಿಎಂ ಮಾಡಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಚಿವರು, ''ಸ್ವಾಮೀಜಿಗಳು ನಮಗೆ ಮಾರ್ಗದರ್ಶಕರಾಗಿರಬೇಕು. ನಿಮ್ಮ ಸ್ವಾಮೀಜಿಗಳು ನಿಮ್ಮ ಹೆಸರನ್ನು ಹೇಳುತ್ತಾರೆ. ನಿಮ್ಮನ್ನು ಸಿಎಂ ಮಾಡಿ ಅಂತಾ ಹೇಳುತ್ತಾರೆ. ಆದರೆ, ಮುಖ್ಯಮಂತ್ರಿಯನ್ನು ಮಾಡುವುದು ಕಾಂಗ್ರೆಸ್ ಶಾಸಕಾಂಗ ಪಕ್ಷ'' ಎಂದು ಹೇಳಿದರು.
ಇದನ್ನೂ ಓದಿ:ಅನರ್ಹ ರೇಷನ್ ಕಾರ್ಡ್ಗಳು ಮಾತ್ರ ರದ್ದು, ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ: ಸಿಎಂ ಭರವಸೆ