ಬೆಂಗಳೂರು: "ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಅನುದಾನ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು. ಈ ಹಿಂದೆ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಎರಡು ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರು. ಅವರ ಅವಧಿಯಲ್ಲಿ ಅನ್ಯಾಯವಾಗಿತ್ತು ಎನ್ನುವುದಾದರೆ ಬಿಜೆಪಿಯವರು ಸಾಬೀತುಪಡಿಸಲಿ" ಎಂದು ಸವಾಲು ಹಾಕಿದರು.
"ಜಿಎಸ್ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ರೆ ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಸಂಪೂರ್ಣವಾಗಿ ನಮಗೆ ಸಿಕ್ಕಿಲ್ಲ. ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಕೇಳಿದರು ಸಹ ಈವರೆಗೆ ಕೊಟ್ಟಿಲ್ಲ. ಎನ್ಡಿಆರ್ಎಫ್ ಫಂಡ್ ಸಹ ಬಂದಿಲ್ಲ. ಆದರೂ ನಾವು ಇದನ್ನೆಲ್ಲ ರಾಜಕೀಯ ಮಾಡೋದಿಕ್ಕೆ ಹೋಗಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಾವು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸುತ್ತೇವೆ. ದೇಶದ ಜನತೆಗೆ ಗೊತ್ತಾಗಲಿ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಜನರಿಗೆ ಗೊತ್ತಾಗಿದೆ. ವಿಶೇಷ ಅನುದಾನವನ್ನು ನಾವು ಕೇಳಿಲ್ಲ. ಆದರೆ, ನಮಗೆ ಬರಬೇಕಾದ ಪಾಲು ಕೊಟ್ಟರೆ ಸಾಕು. ಯುಪಿಎ ಮತ್ತು ಎನ್ಡಿಎ ಅವಧಿಯ ಅನುದಾನ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ. ರಾಜ್ಯದಲ್ಲಿ ನಾವು ಹೊರಡಿಸುತ್ತೇವೆ" ಎಂದು ಹೇಳಿದರು.