ಮಂಡ್ಯ:ಒಬ್ಬ ಮಾಜಿ ಮುಖ್ಯಮಂತ್ರಿಯಾದರೂ ಹಾದಿ ಬೀದಿ ರಂಪಾಟ ಮಾಡ್ತಿರೋದು ಎಷ್ಟು ಸರಿ?. ಇದರ ಬಗ್ಗೆ ಮಾತನಾಡೋದಕ್ಕೆ ನಮಗೆ ಮುಜುಗರ ಆಗಿದೆ ಎಂದು ಕಾಂಗ್ರೆಸ್ ಹಾಗೂ ಡಿಕೆಶಿ ವಿರುದ್ಧ ಜೆಡಿಎಸ್ ಪ್ರತಿಭಟನೆ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆ ಮಾನ ತೆಗೆದವರು ಯಾರು?. ಈ ಘಟನೆ ನಡೆದಿರುವುದಕ್ಕೆ ಯಾರ ಕುಟುಂಬ ಕಾರಣ? ಯಾವ ಸಾಧನೆಗಾಗಿ ಪ್ರತಿಭಟನೆ ಮಾಡಿಸುತ್ತಿದ್ದಾರೆ?. ತಮ್ಮ ಹುಡುಗ ಮಾಡಿದ್ದು ಸರಿಯಿದೆ ಅನ್ನುವ ಸಂತೋಷಕ್ಕಾ?. ಇಷ್ಟೊಂದು ಕುಟುಂಬ ಇಂದು ಬೀದಿಗೆ ಬಂದಿದೆ. ಪಕ್ಕದ ಮನೆ ಮದುವೆಗೆ ಹೋಗಲು ಯೋಚಿಸುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಲಾಗದ ಪರಿಸ್ಥಿತಿ ಬಂದಿದೆ ಎಂದರು.
ರೇವಣ್ಣ ಕುಟುಂಬ, ನನ್ನ ಕುಟುಂಬ ಬೇರೆ ಬೇರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಹೌದಾ, ಇವಾಗ ಯಾರ ಪರ ಪ್ರತಿಭಟನೆ ಮಾಡ್ತಿದ್ದಾರೆ?. ಸಂತ್ರಸ್ತ ಹೆಣ್ಣುಮಕ್ಕಳ ಬಗ್ಗೆ ಅನುಕಂಪ ತೋರಲಿಲ್ಲ. ಅವರಲ್ಲಿ ಕ್ಷಮೆ ಕೂಡ ಕೇಳಲಿಲ್ಲ. ಅನ್ಯಾಯ ಆದವರಿಗೆ ನಿಮ್ಮ ಪರ ಇದ್ದೀವಿ ಎನ್ನಲಿಲ್ಲ. ಪ್ರಜ್ವಲ್ನ ಕರೆಸುವ ಜವಾಬ್ದಾರಿ ಯಾರದ್ದು?. ಸಾಮಾನ್ಯ ವ್ಯಕ್ತಿ ಆರೋಪಿ ಹೊರಗೆ ಹೋದರೆ ಅವರಪ್ಪ, ಅಣ್ಣನನ್ನ ಕರೆಸಿ ಕೂರಿಸ್ತೀರಾ? ಕುಮಾರಸ್ವಾಮಿಯೇ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ನ ಕರೆಸಬೇಕಲ್ವ? ಪ್ರಜ್ವಲ್ ಕುಮಾರಸ್ವಾಮಿಯ ಅಣ್ಣನ ಮಗ. ಪೆನ್ಡ್ರೈವ್ ಎಲ್ಲಿಂದ ಬಂತು?. ವಿಡಿಯೋ ರೆಕಾರ್ಡ್ ಮಾಡಿದವರು ಯಾರು?. ಸಂತ್ರಸ್ತರನ್ನ ಬೀದಿಗೆ ತಂದವರು ಯಾರು? ಎಂದು ಪ್ರಶ್ನಿಸಿದರು.
ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಉಪಮುಖ್ಯಮಂತ್ರಿಗಳು. ಅವರ ಬಳಿ ಸಂತ್ರಸ್ತರು, ಸಂತ್ರಸ್ತರ ಪರ ಇರುವವರು ಭೇಟಿ ಮಾಡಿ ಮಾಹಿತಿ ನೀಡಿ ಚರ್ಚೆ ಮಾಡಿದರೆ ತಪ್ಪೇನು?. ಚರ್ಚೆ ಮಾಡೋದು ಅಪರಾಧನಾ?. ತನಿಖೆ ಆಗೋವರೆಗೂ ಕಾಯುವ ತಾಳ್ಮೆ ಜೆಡಿಎಸ್ನವರಿಗೆ ಇಲ್ಲ. ರಾಜ್ಯದ ಹಲವು ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದರೆ, ಕರ್ನಾಟಕದ ತನಿಖೆ ಸಂಸ್ಥೆಯಿಂದ ಸಿಬಿಐ ಮಾಡಿದ ತನಿಖೆಗಳೆಲ್ಲ ಕ್ಲೀನ್ ಚಿಟ್ ಆಗಿವೆ. ಇಲ್ಲ ಮೂಲೆ ಸೇರಿವೆ. ಈ ಹಿಂದೆ ಕುಮಾರಸ್ವಾಮಿಯೇ ರಾಜ್ಯದ ಪೊಲೀಸರನ್ನ ಸಮರ್ಥರು, ದಕ್ಷರು ಎಂದಿದ್ದಾರೆ ಎಂದು ಹೆಚ್ಡಿಕೆ ವಿರುದ್ದ ಕಿಡಿಕಾರಿದ್ದಾರೆ.