ಬೆಂಗಳೂರು: ''ಸಿಎಂ ಡಿನ್ನರ್ ಸಭೆಯಲ್ಲಿ ಅಹಿಂದ ಸಚಿವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ'' ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಆಪ್ತ ಸಚಿವರ ಸಭೆ ಅಂತ ಅಲ್ಲ. ಅಹಿಂದ ಸಚಿವರೂ ಕೂಡಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಮಾತನಾಡಿದ್ದರಲ್ಲಿ ತಪ್ಪೇನಿದೆ?. ಹಿಂದಿನ ಅಹಿಂದ ಸಭೆಗಳೇ ಬೇರೆ. ಅಲ್ಲಿ ಊಟಕ್ಕೆ ಸೇರಿ ಸಮಾಜದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ನಾಳೆ ನಾವು ಲಿಂಗಾಯತ ಶಾಸಕರು ಸೇರುತ್ತೇವೆ. ನಾವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದನ್ನು ತಪ್ಪು ಎನ್ನಲು ಆಗುತ್ತಾ?. ಒಕ್ಕಲಿಗ ನಾಯಕರೂ ಕೂಡ ಅವರ ಸಮಸ್ಯೆಗಳ ಚರ್ಚೆಗೆ ಸೇರಿರುತ್ತಾರೆ. ಬೇರೆ ಅರ್ಥ ಏಕೆ?'' ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷಗಳು ರಾಜಕೀಯ ಮಾಡುತ್ತಿವೆ:ಗುತ್ತಿಗೆದಾರ ಸಚಿನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಪ್ರಿಯಾಂಕ್ ವಿರುದ್ಧ ಯಾಕೆ ಪ್ರತಿಭಟನೆ ಮಾಡಬೇಕು?. ಆತ್ಮಹತ್ಯೆಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧವೇನು?. ಕೇಸಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ತನಿಖೆ ನಡೆಯುತ್ತಿದೆ, ಸತ್ಯ ಎಲ್ಲವೂ ಹೊರಬರುತ್ತದೆ. ವಿಪಕ್ಷಗಳು ಸುಮ್ಮನೆ ರಾಜಕೀಯ ಮಾಡುತ್ತಿವೆ'' ಎಂದರು.