ಬೆಂಗಳೂರು:ಕಾವೇರಿ ಜಲ ವಿವಾದದಲ್ಲಿ ರಾಜ್ಯದ ಪರ ವಾದಿಸಿ, ನ್ಯಾಯ ಒದಗಿಸಿದ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರು ಇಂದು ದೆಹಲಿಯಲ್ಲಿ ನಿಧನರಾಗಿದ್ದಾರೆ. ನಾರಿಮನ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
'ನಾರಿಮನ್ ಅವರು ಈ ದೇಶ ಕಂಡ ಅಪ್ರತಿಮ ನ್ಯಾಯವಾದಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಅವರು, ಉದಾರ ಮಾನವತಾವಾದಿ ಆಗಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕಾವೇರಿ ನೀರಿನ ಹಕ್ಕಿನ ವಿಚಾರವಾಗಿ ಮಾತನಾಡುವಾಗ ಇದು ಅನುಭವಕ್ಕೆ ಬಂದಿತ್ತು' ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಕಾವೇರಿ ಜಲ ವಿವಾದ ಭುಗಿಲೆದ್ದಾಗ ನಾರಿಮನ್ ಅವರು ಕರ್ನಾಟಕದ ಹಕ್ಕನ್ನು ಸಮರ್ಥವಾಗಿ ಮಂಡಿಸಿದ್ದರು. ಅವರ ವಾದದಿಂದಾಗಿ ರಾಜ್ಯಕ್ಕೆ ಹೆಚ್ಚು ನೀರು ಸಿಕ್ಕಿತು. ನಮ್ಮ ಅಹವಾಲುಗಳನ್ನು ನಾರಿಮನ್ ಅವರು ಸದಾ ಸಹಾನುಭೂತಿಯಿಂದ ಆಲಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.
ನಾರಿಮನ್ ಅವರೊಂದಿಗೆ ನನಗೆ ವೈಯಕ್ತಿಕವಾಗಿ ಗಾಢ ಸಂಬಂಧವಿತ್ತು. ಕಾವೇರಿ ನದಿಯ ವಿಚಾರದಲ್ಲಿ ಪ್ರತಿಯೊಂದು ವಿವರ ಮತ್ತು ಅಂಕಿ - ಅಂಶಗಳನ್ನೆಲ್ಲ ಅವರು ಕರತಲಾಮಲಕ ಮಾಡಿಕೊಂಡಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅವರು ನಮ್ಮನ್ನೆಲ್ಲ ಉದ್ದೇಶಿಸಿ, ಸಚಿವರಾದವರು ಯಾವುದೇ ವಿಚಾರದ ಬಗ್ಗೆ ಸೂಕ್ತ ತಿಳಿವಳಿಕೆ ಹೊಂದಿರಬೇಕು ಎಂದು ಹೇಳುತ್ತಿದ್ದರು. ಅವರ ಇಂತಹ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ.