ಬೆಂಗಳೂರು: ನಾಗರಿಕ ಸೌಲಭ್ಯದ (CA) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ಖನಿಜ ಭವನದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಆರ್ಟಿಐ ಕಾರ್ಯಕರ್ತ ರಾಜ್ಯಪಾಲರಿಗೆ ಪ್ರಾಸಿಕ್ಯುಷನ್ಗೆ ಕೋರಿ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ಕೆಐಎಡಿಬಿ (ರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಸಿ.ಎ ನಿವೇಶನಗಳನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆ ಮೂಲಕ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ. ಇಷ್ಟಕ್ಕೂ ಸಿ.ಎ ನಿವೇಶನಗಳನ್ನು ಕಾನೂನು ಪ್ರಕಾರ ಹರಾಜು ಹಾಕುವ ಪದ್ದತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ. ಸಿ.ಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದರ ಜತೆಗೆ ಇಲಾಖಾ ವೆಬ್ಸೈಟ್ನಲ್ಲೂ ಪ್ರಕಟಿಸಲಾಗಿದೆ. ವೆಬ್ಸೈಟ್ನಲ್ಲಿ ಹಾಕುವ ವ್ಯವಸ್ಥೆ ಮೊದಲು ಇರಲಿಲ್ಲ. ಇದು ಮೊದಲು ಎಂದು ಸ್ಪಷ್ಟಪಡಿಸಿದರು.
ಸಿ.ಎ ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರ್ಕಾರದಿಂದ ಅನುಮೋದನೆ ಪಡೆದು ನೇರವಾಗಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಮೊದಲು ಸಿ.ಇ.ಒ., ಇವರ ಅಧ್ಯಕ್ಷತೆಯಲ್ಲಿನ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸು ಮಾಡಿದ ನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ. ಈ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಇಲಾಖಾ ಪ್ರಧಾನ ಕಾರ್ಯದರ್ಶಿ, ಇತರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರು, ಕೈಗಾರಿಕಾ ಆಯುಕ್ತರು, ಸಿ.ಇ.ಒ., ಕೆಐಎಡಿಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ಇತರೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದರು.
ಈ ಬಾರಿ ಒಟ್ಟು 377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನಗಳನ್ನು (96.59 ಎಕರೆ) ಮಾತ್ರ ಹಂಚಿಕೆ ಮಾಡಲಾಗಿದೆ. ಅಂದರೆ ಅಂದಾಜು 25% ಮಾತ್ರ ಹಂಚಿಕೆ ಮಾಡಿದ್ದು ಉಳಿದ ನಿವೇಶನಗಳು ಹಂಚಿಕೆಗೆ ಬಾಕಿ ಇವೆ. ಒಂದೊಂದೇ ಅರ್ಜಿ ಬಂದ ಪ್ರಕರಣಗಳಲ್ಲಿ ಅಂತಹ ಹಂಚಿಕೆಯನ್ನು ಮಾಡಲು ಅವಕಾಶವಿದ್ದರೂ (ಇದು ಟೆಂಡರ್ ಪ್ರಕ್ರಿಯೆ ಅಲ್ಲ) ಇದನ್ನು ಪರಿಗಣಿಸದೆ ಹೊಸದಾಗಿ ನೋಟಿಫಿಕೇಷನ್ ಮಾಡಲಾಗುತ್ತಿದೆ. ಇದರಿಂದ ಅರ್ಹರಿಗೆ ಇನ್ನಷ್ಟೂ ಅವಕಾಶ ಲಭ್ಯವಾಗಲಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿತ್ತು. ಅದನ್ನು ಮತ್ತೆ ಹೊಸದಾಗಿ ಕರೆದಿದ್ದೇವೆ ಎಂದರು ವಿವರಿಸಿದರು.