ಬೆಂಗಳೂರು:ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಆರ್ಥಿಕ ಇಲಾಖೆ ಅನುಮತಿ ನೀಡುತ್ತಿದ್ದಂತೆ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಅಡಿ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಬೇಕಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿ ಒಂದೇ ಸರ್ಕಾರದಿಂದ ಎರಡು ಉತ್ತರ ಬಂದಿದ್ದರಿಂದ ಸದನದಲ್ಲಿ ಗೊಂದಲ ಸೃಷ್ಟಿಯಾದ ಘಟನೆ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಿಕ್ಷಕರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 10 ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಕೋರಿದ್ದು, ಅದರಲ್ಲಿ 6,500 ಶಿಕ್ಷಕರನ್ನು ಈ ಭಾಗಕ್ಕೆ ನೇಮಕ ಮಾಡಲಾಗುತ್ತದೆ. 52 ಸಾವಿರ ಶಿಕ್ಷಕರ ಕೊರತೆ ಇದೆ. ಅತಿಥಿ ಉಪನ್ಯಾಸಕರ ಬಳಕೆ ಮಾಡುತ್ತಿದ್ದು, ಇದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗಿದೆ. ಕೊಠಡಿಗಳ ಸಂಖ್ಯೆಯನ್ನೂ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುತ್ತೇವೆ. 4 ವರ್ಷದ ಹಿಂದೆ 5 ಸಾವಿರದ ಒಳಗೆ ಮಾತ್ರ ನೇಮಕ ಮಾಡಿದ್ದರು. ನಾವು 12 ಸಾವಿರ ಮಾಡಿದ್ದೇವೆ. ಈಗ 10 ಸಾವಿರ ಹುದ್ದೆಯಲ್ಲಿ ಆರ್ಥಿಕ ಇಲಾಖೆ ಅನುಮತಿ ಬರುತ್ತಿದ್ದಂತೆ ನೇಮಕಾತಿಗೆ ಮುಂದಾಗಲಿದ್ದೇವೆ ಎಂದರು.
ಆರ್ಥಿಕ ಇಲಾಖೆ ಅನುಮತಿ 371ಜೆಗೆ ಬರಲ್ಲ. ಆದರೂ ಯಾಕೆ ಕೇಳಿದ್ದೀರಿ ಎನ್ನುವ ಪ್ರಶ್ನೆಗೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, 371 ಜೆ ಅಡಿ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಇಲ್ಲ ಎನ್ನುವುದು ನಿಜ, ಅದರಂತೆಯೇ ನೇಮಕಾತಿಗೆ ಸಿಎಂ ಸೂಚಿಸಿದ್ದಾರೆ ಎಂದರು.