ಮಧು ಬಂಗಾರಪ್ಪ (ETV Bharat) ಶಿವಮೊಗ್ಗ:ಸರ್ಕಾರಿ ಶಾಲೆಯ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ತೆಗೆದುಕೊಳ್ಳುವ ಸಾರ್ಮಥ್ಯ ತೋರಿಸಿದ ಮೇಲೆ ನನ್ನ ಮತ್ತು ಸರ್ಕಾರದ ಕೆಲಸ ಜಾಸ್ತಿಯಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಪ್ರೆಸ್ಟ್ರಸ್ಟ್ನಲ್ಲಿ 2023-2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಕುರಿತು ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಹಲವು ನ್ಯೂನ್ಯತೆಗಳಿವೆ. ಅವುಗಳನ್ನು ಸರಿ ಪಡಿಸುವ ಕೆಲಸ ನಾನು ಮಾಡುತ್ತೇನೆ ಎಂದರು.
ಮಕ್ಕಳಿಗೆ ಒಳ್ಳೆಯದಾಗಲಿ, ಧೈರ್ಯವಾಗಿರಿ. ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರ ಮಕ್ಕಳ ಒಳಿತಿಗಾಗಿಯೇ. ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಎಲ್ಲ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಲ್ಲರೂ ನಮ್ಮ ಮನೆ ಮಕ್ಕಳು ಇದ್ದಂತೆ ಅವರಿಗೆ ಸಹಕಾರ ಕೊಡುವುದು ನಮ್ಮ ಕರ್ತವ್ಯ. ಸರ್ಕಾರಿ ಶಾಲೆಗಳಲ್ಲಿ ತುಂಬಾ ಬುದ್ಧಿವಂತ ಶಿಕ್ಷಕರಿದ್ದಾರೆ. ನಿಮ್ಮ ಸೇವೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಮ್ಮ ಮಕ್ಕಳ ಭವಿಷ್ಯಕ್ಕೆ ಸಹಾಯ ಮಾಡಿ ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ 625ಕ್ಕೆ 625 ಅಂಕ ಪಡೆದು ಸರ್ಕಾರಿ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅನೇಕ ನ್ಯೂನ್ಯತೆ ಇದ್ದರು ಸಹ ಅದನ್ನು ಮೀರಿ ಅಂಕಿತಾ ಓದಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಶಿಕ್ಷಕರ ಕೊರತೆ ನಿಗಿಸಲು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆಲವರು ಕೋರ್ಟ್ಗೆ ಹೋದರೂ ಕೋರ್ಟ್ನ ಅನುಮತಿ ಪಡೆದು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದೆಯು ಸಹ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಕೊರೊನಾ ಸಮಯದ ವಿದ್ಯಾರ್ಥಿಗಳು ಈಗ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಶೇ 20 ರಷ್ಟು ಕೃಪಾಂಕ ಅಂಕ ಕೊಟ್ಟಿದ್ದೇವೆ. ಈ ವರ್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತವಾಗಿರುತ್ತದೆ. ಕೃಪಾಂಕ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ಆ ವಿದ್ಯಾರ್ಥಿಗಳು ಪುನಃ ಎರಡನೇ ಪರೀಕ್ಷೆ ತೆಗೆದುಕೊಳ್ಳಬಹುದು. ಇದಕ್ಕೆ ಶಿಕ್ಷಕರು ತಯಾರಾಗಿದ್ದಾರೆ. ಕಳೆದ ಬಾರಿ 28 ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ 3ನೇ ಸ್ಥಾನ ಪಡೆದುಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಎಸ್ಎಸ್ಎಲ್ಸಿ ಟಾಪರ್ ಅಂಕಿತಾಗೆ ಕರೆ ಮಾಡಿ ಶುಭ ಹಾರೈಸಿದ ಡಿಸಿಎಂ ಡಿ ಕೆ ಶಿವಕುಮಾರ್ - dcm congratulated SSLC topper