ಶಿವಮೊಗ್ಗ :ಈ ಬಾರಿಯ ಪಿಯುಸಿ ಫಲಿತಾಂಶ ಉತ್ತಮವಾಗಿ ಬಂದಿದ್ದು, ಶೇ 81.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷದ ಫಲಿತಾಂಶದಲ್ಲಿ ಶೇ 6 ರಷ್ಟು ಹೆಚ್ಚುವರಿ ಸಕ್ಸಸ್ ರೇಟ್ ಬಂದಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಸಚಿವನಾದ ಮೇಲೆ ಸಾಕಷ್ಟು ಟೀಕೆ - ಟಿಪ್ಪಣಿಗಳು ಬಂದವು. ಆದರೇ ನಾನು ಇದ್ಯಾವುದಕ್ಕೂ ಉತ್ತರ ನೀಡಲಿಲ್ಲ. ಶಿಕ್ಷಣ ಸಚಿವನಾದವನು ಮಕ್ಕಳಿಗೆ ಪಾಠ ಮಾಡುವವನಲ್ಲ. ಇಲಾಖೆ ನಡೆಸುವ ವ್ಯವಸ್ಥಾಪಕನಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ಶೇ 6 ರಷ್ಟು ಹೆಚ್ಚುವರಿ ಫಲಿತಾಂಶವನ್ನು ವಿದ್ಯಾರ್ಥಿಗಳು ನಮಗೆ ಕೊಡುಗೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.