ಶಿವಮೊಗ್ಗ: ಕರ್ನಾಟಕದಲ್ಲಿ ಬಿಜೆಪಿ ಬದುಕಿದ್ದು 2004ರಲ್ಲಿ ಬಂಗಾರಪ್ಪನವರು ಆ ಪಕ್ಷ ಸೇರ್ಪಡೆಯಾದ ಮೇಲೆ. ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ಮತ್ತು ಸ್ಫೂರ್ತಿ ಕೊಟ್ಟವರು ನಮ್ಮಪ್ಪ ಬಂಗಾರಪ್ಪನವರು ಎಂಬುದನ್ನು ಬಿಜೆಪಿಯವರು ಮತ್ತು ಬಿ.ವೈ. ರಾಘವೇಂದ್ರ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿ.ವೈ ರಾಘವೇಂದ್ರ ಅವರು ಬಂಗಾರಪ್ಪನವರನ್ನು ಸೋಲಿಸಿದ್ದೇನೆ ಎಂದು ಮೆರೆಯುತ್ತಿದ್ದಾರೆ. ಸೋಲಿಸಿರುವುದು ನಿಜ, ನಾವು ಅದನ್ನು ಅಲ್ಲಗಳೆಯಲು ಆಗಲ್ಲ. ನಿಮ್ಮ ತಂದೆ ಯಡಿಯೂರಪ್ಪನವರು 1999ರ ಚುನಾವಣೆಯಲ್ಲಿ ಸೋತಿದ್ದರು. ಈ ಹಿಂದೆ ಈಶ್ವರಪ್ಪನವರು ಸೋತಿದ್ದರು. ಸೋಲಿನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಬೇಡಿ ರಾಘವೇಂದ್ರ ಅವರೇ, ನಿಮಗೂ ಕಾಲ ಬರುತ್ತದೆ. ನೀವು ಅನುಭವಿಸುತ್ತೀರಿ, ಅನುಭವಿಸಲೇಬೇಕು ಎಂದು ವಾಗ್ದಾಳಿ ನಡೆಸಿದರು.
2004ರಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪನವರ ಗೆಲುವಿಗೆ ನಾನು ಒಬ್ಬ ಕಾರಣ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ರಾಘವೇಂದ್ರ ಅವರೇ, ನೀವಿನ್ನು ರಾಜಕಾರಣದಲ್ಲಿ ಬೆರಳು ಚೀಪಿಕೊಂಡು ಕುಳಿತಿದ್ರಿ. ನಿಮಗೆ ಆಗ ರಾಜಕೀಯದ ಅನುಭವ ಇರಲಿಲ್ಲ. ಅಂದು ಶಿಕಾರಿಪುರದಲ್ಲಿ ಬೃಹತ್ ಮೆರವಣಿಗೆಯ ಮೂಲಕ ತೆರಳಿ ಯಡಿಯೂರಪ್ಪನವರು ಬಿಜೆಪಿಯಿಂದ ನಾಮಪತ್ರ ಸಲ್ಲಿಸುತ್ತಾರೆ. ಯಡಿಯೂರಪ್ಪನವರನ್ನು ಗೆಲ್ಲಿಸಬೇಕು ಎಂದು ನಮ್ಮ ತಂದೆಯವರು ಕರೆ ನೀಡುತ್ತಾರೆ. ಆದಾದ ಮೇಲೆ ಯಡಿಯೂರಪ್ಪನವರು ನನ್ನ ಕೈ ಹಿಡಿದು ಹೇಳುತ್ತಾರೆ, ಬಂಗಾರಪ್ಪನವರು ಇಡೀ ರಾಜ್ಯ ಸುತ್ತಬೇಕಾಗುತ್ತದೆ. ನೀನು ನನ್ನ ಗೆಲುವಿಗೆ ಸಹಕಾರ ಕೊಡಬೇಕು. ನನ್ನ ಪರವಾಗಿ ಪ್ರಚಾರ ಮಾಡಬೇಕು ಎಂದು. ಆಗ ಅವರ ಪರವಾಗಿ ಕ್ಷೇತ್ರದಲ್ಲಿ ಓಡಾಡಿದ್ದೆ ಎಂದು ರಾಘವೇಂದ್ರ ಹೇಳಿಕೆಗೆ ಮಧು ಬಂಗಾರಪ್ಪ ತಿರುಗೇಟು ನೀಡಿದರು.
ರಾಜ್ಯದಲ್ಲಿ ಬಿಜೆಪಿಗೆ, ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಬಂಗಾರಪ್ಪನವರು. ನನಗೆ ಉತ್ತರ ಕೊಡುವುದಕ್ಕೂ ಮೊದಲು ಈಶ್ವರಪ್ಪನವರಿಗೆ ಉತ್ತರ ಕೊಡಿ ಬಿವೈಆರ್ ಅವರೇ. ಈಶ್ವರಪ್ಪ ಹಗಲು, ರಾತ್ರಿ ನಿಮ್ಮನ್ನು ಬೈಯುತ್ತಿದ್ದಾರೆ. ಇನ್ನೂ ಕೆಟ್ಟ ಪದ ಬಳಕೆ ಮಾಡಬೇಕಾಗುತ್ತದೆ ಎಂದು ಈಶ್ವರಪ್ಪನವರು ಹೇಳಿದ್ದಾರೆ. ಬಿವೈಆರ್, ಯಡಿಯೂರಪ್ಪನವರ ಕುಟುಂಬ ನಮ್ಮ ಋಣದಲ್ಲಿದೆ. ನಮ್ಮ ತಂದೆ ಬಂಗಾರಪ್ಪನವರು ಋಣದಲ್ಲಿಲ್ಲ. 2009ರಲ್ಲಿ ಬಂಗಾರಪ್ಪನವರನ್ನು ಸೋಲಿಸಿದ ಮಾತ್ರಕ್ಕೆ ನೀವು ರಾಜ್ಯ ನಾಯಕರಲ್ಲ, ನೀವು ಹೇಗೆ ಗೆಲುವು ಸಾಧಿಸಿದ್ದಿರಿ ಎಂಬುದು ಗೊತ್ತಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ:28 ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿಯಾಗುತ್ತೇವೆ: ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ - B S Yediyurappa